ಕಲೆ ಅನಾವರಣ: ವೇದಿಕೆ ಭಣಭಣ
ವಿದ್ಯಾರಣ್ಯ ವೇದಿಕೆ, ಹಂಪಿ: ಈ ಬಾರಿಯ ಹಂಪಿ ಉತ್ಸವದಲ್ಲಿ ಎಲ್ಲದಕ್ಕೂ ಶುಲ್ಕ... ಹೀಗಾಗಿ ಸಮೂಹ ನೃತ್ಯ, ಸುಗಮ ಸಂಗೀತ, ದಾಸರ ಪದ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಳನ್ನು ಕೇಳುವ ಅವಕಾಶ ವೇದಿಕೆ ಮುಂದೆ ಹಾಕಿದ್ದ ಕುರ್ಚಿಗಳಿಗೆ ಒದಗಿ ಬಂದಿತು. ಹೌದು, ಇಂತಹದೊಂದು ವಾತವರಣಕ್ಕೆ ಸಾಕ್ಷಿಯಾಗಿದ್ದು ಎದುರು ಬಸವಣ್ಣ ಮಂಟಪದ ಹತ್ತಿರದ ವಿದ್ಯಾರಣ್ಯ ವೇದಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6 ಗಂಟೆಗೆ ಆರಂಭವಾಗಿದ್ದು, ಬೆಂಗಳೂರಿನ ಆರಾಧನ ನೃತ್ಯ ಶಾಲೆ ತಂಡದಿಂದ ಸಮೂಹ ನೃತ್ಯ, ಬೆಂಗಳೂರಿನ ಗೀತಾ ಎಸ್. ಹೆಬ್ಳಿಕರ್, ಹೊಸಪೇಟೆಯ ಕೆ. ಸಣ್ಣತಿಮ್ಮಪ್ಪ ಇವರ ಕ್ಲಾರಿಯೋನೆಟ್ ಹಾಗೂ ಗೊಲ್ಲರಹಳ್ಳಿಯ ಶ್ರೀಮಾತಾ ಮಂಜಮ್ಮ ಜೋಗತಿ ಇವರ ಜೋಗತಿ ನೃತ್ಯ ನೆರೆದಿದ್ದ ಕಲವೇ ಪ್ರೇಕ್ಷಕರಿಗೆ ಆನಂದ, ಕಿವಿಗೆ ಸಂಗೀತ ಕೇಳಲು ಇಂಪಾಗಿತ್ತು. ಆದರೆ ಸಭೆಯಲ್ಲಿ ಸಭಿಕರಿಲ್ಲದೆ ಭಣಭಣ ಎನ್ನುವಂತಿತ್ತು. ವಿದ್ಯಾರಣ್ಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿ ಉಳಿವು, ವಿಶಿಷ್ಟ ಕಲೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿತ್ತು. ಸಭಿಕರಿಗೆಂದೆ ಆಯೋಜಿಸುವ ಕಾರ್ಯಕ್ರಮಗಳಿಗೆ ಕಲಾಸಕ್ತರಿಲ್ಲದೆ ವೇದಿಕೆ ಮುಂಭಾಗ ಬಿಕೋ ಎನ್ನುತ್ತಿತ್ತು. ಕನ್ನಡ ಚಿತ್ರಗೀತೆಗಳು, ನೃತ್ಯ ರೂಪಕ, ಜನಪದ ಗೀತೆ, ಹೂವಿನಹಡಗಲಿ ರಂಗಭಾರತಿ ಕಲಾವಿದರಿಂದ ವಾರ್ಡ್ ನಂ. 6 ಎಂಬ ನಾಟಕ ಪ್ರದರ್ಶನವಾದವು. ಕಲಾವಿದರ ಕಲೆಯನ್ನು ಆಸ್ವಾದಿಸುವವರೆ ಇಲ್ಲದೆ ಕಲಾವಿದರಿಗೂ ಬೇಸರ ಉಂಟು ಮಾಡಿತ್ತು. ರಾಜೋತ್ಸವ ಪ್ರಶಸ್ತಿ ವಿಜೇತ ಜೋಗತಿ ಮಂಜಮ್ಮ ಇವರ ಜೋಗತಿ ನೃತ್ಯಕ್ಕೆ ಇದ್ದ ಜನರೆ ಸಿಳ್ಳೆ, ಕೇಕೆ ಹಾಕುತ್ತ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.