ಬೆಂಕಿಗೆ ಬಣವಿಗಳು ಭಸ್ಮ
ಕೊಟ್ಟೂರು: ಆಕಸ್ಮಿಕ ಬೆಂಕಿ ತಗುಲಿ ಶೇಂಗಾ ಮತ್ತು ಮೆಕ್ಕೆಜೋಳದ ಬಣವಿಗಳು ಭಸ್ಮಗೊಂಡು ರು. 20 ಸಾವಿರಕ್ಕೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಸಮೀಪದ ರಾಂಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. ಗ್ರಾಮದ ಕಂಕ್ರಿ ಹನುಮಂತಪ್ಪ, ಕಂಕ್ರಿ ಗೋಣೆಮ್ಮ, ಕಂಕ್ರಿ ಚನ್ನಪ್ಪ, ಶಂಭುಲಿಂಗಪ್ಪ ಎಂಬುವವರಿಗೆ ಸೇರಿದ ಬಣವಿಗಳಾಗಿವೆ. ಗ್ರಾಮದ ಹೊರವಲಯದ ಕಣಗಳಲ್ಲಿ ಶೇಖರಿಸಿಡಲಾಗಿದ್ದ ಈ ಬಣವಿಗಳಿಗೆ ರಾತ್ರಿ 12.30ರ ಸುಮಾರಿನಲ್ಲಿ ಹಠಾತ್ತನೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಪ್ರಖರತೆ ಹರಡುವ ಮುನ್ನವೆ ಗ್ರಾಮಸ್ಥರು ರಾತ್ರಿಯಿಡಿ ಬೆಂಕಿ ನಂದಿಸುವ ಯತ್ನ ನಡೆಸಿದರು.ಸುದ್ದಿ ತಿಳಿಯುತ್ತಿದ್ದಂತೆ ಕೊಟ್ಟೂರು, ಹೂವಿನಹಡಗಲಿಯಿಂದ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿತು. ಶಾಸಕ ಭೀಮಾನಾಯ್ಕ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವೈಯಕ್ತಿಕ ಪರಿಹಾರ ವಿತರಿಸಿದರು. ಕೃಷಿ ಅಧಿಕಾರಿಗೆ ಹೆಚ್ಚಿನ ಪರಿಹಾರ ನೀಡುವಂತೆ ತಿಳಿಸಿದರು.