ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮನಸೂರೆಗೊಂಡ ಮಲ್ಲಕಂಬ

Mainashree
Updated On : 11 Jan 2014, 11:44 am

ಹಂಪಿ: ಕೈಕಾಲುಗಳ ಕಸರತ್ತನಿಂದ ಮೈಯೊಳಗಿನ ಮೂಳೆಗಳನ್ನು ಬಾಗಿಸುತ್ತಾ, ಕಂಬದ ಮೇಲೆ ವಿವಿಧ ಆಸನಗಳನ್ನು ಮಾಡುವ ಬಾಲಕ, ಬಾಲಕಿಯರು ನೆರೆದಿದ್ದ ಪ್ರೇಕ್ಷಕರಲ್ಲಿ ಮೈನವೀರೆಳುಸುವ ವಾತವರಣ ಇಲ್ಲಿನ ಕಡ್ಡಿರಾಂಪುರ ಕುಸ್ತಿ ಅಖಾಡದಲ್ಲಿತ್ತು.
ಹಂಪಿ ಉತ್ಸವದ ಅಂಗವಾಗಿ ಆಯೋಜಿಸಿರುವ ಗ್ರಾಮೀಣ ಕ್ರೀಡೆಗಳಲ್ಲಿ ಮಲ್ಲಕಂಬ ವಿದ್ಯೆಯನ್ನು ಹಂಪಿ ವಿಜಯನಗರ ಅರಸರು ಪ್ರೋತ್ಸಾಹಿಸಿ ಅದಕ್ಕಾಗಿಯೆ ಮಲ್ಲಕಂಬ ವಿದ್ಯೆಗೆ ವಿಶೇಷ ಸ್ಥಾನ ನೀಡಿದ್ದರು. ಇಂದು ಅವನತಿಯ ಅಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳು ಉತ್ಸವಗಳನ್ನು ಆಯೋಜಿಸಿ ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಪ್ರಯತ್ನ ನಡೆದಿದೆ. ಮಲ್ಲಕಂಬ ಆಟದ ಸ್ಪರ್ಧೆಗೆ ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗಳ ನರೇಗಲ್, ತುಳಿಸೀಪುರ, ಅವರಾದಿ, ಶಿರಗುಪ್ಪಿ ಮತ್ತು ರಾಮಗಿರಿ ಗ್ರಾಮಗಳ 6ರಿಂದ 25 ವರ್ಷದೊಳಗಿನ ಸುಮಾರು 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಡಿಮೆ ಸಮಯ; ಹೆಚ್ಚು ಆಸನ: ಮಹಾರಾಷ್ಟ್ರ ಮೂಲದ ಮಲ್ಲಕಂಬ ವಿದ್ಯೆಯಲ್ಲಿನ ಎಲ್ಲ ಆಸನಗಳನ್ನು ಮಲ್ಲಕಂಬ ವಿದ್ಯೆ ಪಟುಗಳು ಪ್ರದರ್ಶಿಸಿದರು. ಅದರಲ್ಲೂ ಇಂಟರ್‌ಶಾಟ್, ಪದ್ಮಾಸನ, ನಟರಾಜ ಆಸನ, ಮಯೂರಾಸನ, ಚಕೋರಾಸನ, ಏಕಪಾದ ಶಿರಾಸನ, ವೀರಭದ್ರಾಸನ, ಹ್ಯಾಡ್ ಬ್ಯಾಲೆನ್ಸ್, ಟೋ ಬ್ಯಾಲೆನ್ಸ್, ಹ್ಯಾಂಡ್ ಸ್ಟಾಂಡ್, ಶವಾಸನ, ನಿದ್ರಾಸನ, ಚಕ್ರಸಾನ, ಕಂದರಾಸನ, ಕೂರ್ಮಾಸನ ಸೇರಿದಂತೆ ವಿವಿಧ ಪಟ್ಟುಗಳನ್ನು ಕಡಿಮೆ ಅವಧಿಯಲ್ಲಿ ಹೆಚ್ಚು ಆಸನಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳಲ್ಲಿ ರೊಮಾಂಚನ ಮೂಡಿಸಿದರು. ಮಲ್ಲಕಂಬ ಏರಿ ವಿವಿಧ ಆಸನಗಳನ್ನು ಮಾಡುವಾಗ ನೆರೆದಿದ್ದ ಜನರು ಹಾಗೂ ಆಯಾ ತಂಡದ ಕ್ರೀಡಾಪಟುಗಳು ಕೇಕೆ, ಸೀಟಿ, ಚಪ್ಪಾಳೆ ತಟ್ಟುತ್ತ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಆಸನಗಳನ್ನು ಮಾಡುವ ಯತ್ನ ಕ್ರೀಡಾಳುಗಳಿಂದ ನಡೆದಿತ್ತು.
ಅವ್ಯವಸ್ಥೆಯ ಆಟ: ಬೆಳಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಗ್ರಾಮೀಣ ಕ್ರೀಡೆಗಳು ಮಧ್ಯಾಹ್ನ 1ಕ್ಕೆ ಚಾಲನೆ ಪಡೆದವು. ಸ್ಪರ್ಧಾಳುಗಳಲ್ಲಿ ತೀರ ಬೇಸರ ಮೂಡಿತ್ತು. ಇತ್ತ ಯಾವ ಸಚಿವರು, ಜನಪ್ರತಿನಿಧಿಗಳು ತಲೆ ಹಾಕದೆ ಕೊನೆಗೂ ಚಾಲನೆ ಸಿಗದೆ ಅಲ್ಲಿ ನಿಯೋಜಿಸಿದ್ದ ಅಧಿಕಾರಿಗಳೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಲ್ಲಕಂಬ ವಿದ್ಯೆ ಪ್ರದರ್ಶನ ಆರಂಭಿಸಿದರು.
ಉಪಾಹಾರ ಇಲ್ಲ: ಹಂಪಿ ಉತ್ಸವದಲ್ಲಿ ಭಾಗವಹಿಸಲು ದೂರದೂರಿನಿಂದ ಬಂದ ಕ್ರೀಡಾಪಟುಗಳಿಗೆ 11 ಗಂಟೆಗೆಯಾದರೂ ಉಪಾಹಾರ ಸಿಗಲಿಲ್ಲ. ಕ್ರೀಡಾಪಟುಗಳ ವಾಹನಕ್ಕೆ ಪರವಾನಗಿ ನೀಡದ ಕಾರಣ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಕೆಲ ವಾಹನಗಳಿಗೆ ಪರವಾನಗಿ ಇಲ್ಲದ ಕಾರಣ ಕ್ರೀಡಾಪಟುಗಳಿಗೆ ಉಪಾಹಾರದ ತೊಂದರೆ ಉಂಟಾಯಿತು. ಸಮಯಕ್ಕೆ ಸರಿಯಾಗಿ ಸ್ಪರ್ಧೆಗಳು ನಡೆಯಬೇಕಿತ್ತು. ಆದರೆ ಮಲ್ಲಕಂಬ ಸಲಕರಣೆ ಹೊತ್ತ ವಾಹನ ಸಮಯಕ್ಕೆ ಸರಿಯಾಗಿ ಬಾರದ ಕಾರಣ ವಿಳಂಬವಾಗಿದೆ ಎಂಬುದು ಯುವ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಅವರ ಸಬೂಬು. ಪ್ರತಿಯೊಂದು ಸ್ಪರ್ಧೆಗೂ ಶುಲ್ಕ ಕಡ್ಡಾಯಗೊಳಿಸಲಾಗಿತ್ತು. ಇದರಿಂದ ಸ್ಪರ್ಧಾಳುಗಳ ಸಂಖ್ಯೆ ಗಣೀಯ ಕಡಿಮೆಯಾಗಿತ್ತು. ಮಾಹಿತಿ ಕೊರತೆಯಿಂದ ಈ ರೀತಿ ತೊಂದರೆ ಉಂಟಾಗಿದ್ದು, ಈ ಬಾರಿ ಪ್ರಯಾಣ ಭತ್ಯೆ ಇಲ್ಲ, ಶುಲ್ಕ ಇರುವುದರಿಂದ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ಮಲ್ಲಕಂಬ ಸಂಸ್ಥೆ ಕಾರ್ಯದರ್ಶಿ, ಲಕ್ಷ್ಮೇಶ್ವರದ ಸೋಮಶೇಖರ ಕೂಡ್ಲಿ. ಒಟ್ಟಾರೆ ಇಲ್ಲಗಳ ಮಧ್ಯೆ ದೇಶಿಯ ಕ್ರೀಡೆ ಮಲ್ಲಕಂಬ ನಡೆಯಿತು.

ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement