ವಿಜಯನಗರ ಸಾಮ್ರಾಜ್ಯದ ಪರಂಪರೆ ಮರುಕಳಿಸಿದೆ
ಹಂಪಿ: ವಿಜಯನಗರ ಕಾಲದ ಸಾಂಸ್ಕೃತಿಕ ಹಿರಿಮೆ ಹಂಪಿ ಉತ್ಸವ ಮೂಲಕ ಮರುಕಳಿಸುತ್ತಿದೆ ಎಂದು ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಆರ್. ನಿರಂಜನ್ ಹೇಳಿದರು. ಶನಿವಾರ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿ, ವಿಜಯನಗರ ಅರಸರ ಕಾಲದಿಂದ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿದ್ದವು. ಅನಂತರವೂ ಭಜನೆ, ಜಾನಪದ ಕಲಾವಿದರು ಕಲೆ ಅನಾವರಣ ಮಾಡುತ್ತಿದ್ದರು. ಆ ಪರಂಪರೆ ಮುಂದುವರಿಸುವ ಹೊಣೆಗಾರಿಕೆ ಇದೆ ಎಂದರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಅಮರೇಶ ನುಗಡೋಣಿ, ನಿಂಗಪ್ಪ ಮುದೇನೂರ್, ಡಾ. ನಟರಾಜ, ಚಿದಾನಂದ ಸಾಲಿ, ನಿಷ್ಠಿ ರುದ್ರಪ್ಪ, ಎ.ಎಂ. ಜಯಶ್ರೀ, ಡಾ.ಕೆ.ಬಿ. ಬ್ಯಾಳಿ, ಕೆ.ವಿ. ಪ್ರವರ, ಪ್ರಮೋದ್ ತುರುವಿಹಳ್ಳಿ, ಎಸ್. ಮಂಜುನಾಥ, ಎನ್.ಎಸ್.ಪ್ರಸಾದ್, ಗಾಯಕಿ ಕವಿತಾ ವಸಂತಕುಮಾರಿ, ಅನುರಾಧಾ, ಓ. ಸುಜಾತಾ ಇದ್ದರು.
ಎರಡನೇ ದಿನ ಕಾರ್ಯಕ್ರಮಗಳಿಗೆಬಂತು ಜನಸಾಗರ
ಹಂಪಿ: ಮೊದಲ ದಿನ ಜನರಿಲ್ಲದೆ ನೀರಸವಾಗಿದ್ದ ಹಂಪಿ ಉತ್ಸವ 2ನೇ ದಿನ ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಹರಿದು ಬಂದರು. ಕಾರಣ ಪ್ರವೇಶ ಶುಲ್ಕ ರದ್ದು. ಮೊದಲ ದಿನ ಬಸ್ಗಳು ಖಾಲಿ ಓಡಿದರೆ ಶನಿವಾರ ರಾತ್ರಿ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಬಸ್ಗಳ ಕೊರತೆ ಕಂಡಿತು. ಕಾರ್ಯಕ್ರಮ ನೋಡಿ ತಮ್ಮೂರಿಗೆ ಮರಳಲು ಜನ ಪರದಾಡಿದರು. ಉತ್ಸವ ವೀಕ್ಷಿಸಲು ಬಂದ ಜನಕ್ಕೆ ಅಧಿಕಾರಿಗಳ ಅವ್ಯವಸ್ಥೆಗೆ ಬೇಸತ್ತು ಕೆಲವರು ಉತ್ಸವ ನೋಡಲು ಹಿಂದೇಟು ಹಾಕಿದರು. ಪ್ರತಿವರ್ಷ ವಾಹನಗಳಿಗೆ ವಿರೂಪಾಕ್ಷೇಶ್ವರ ದೇವಸ್ಥಾನ ಪಕ್ಕದ ನಿಲ್ದಾಣದವರೆಗೂ ಪ್ರವೇಶ ಇದ್ದುದರಿಂದ ಆಸಕ್ತರು ತಮ್ಮ ಕುಟುಂಬ ಸಮೇತ ಹಂಪಿ ಉತ್ಸವಕ್ಕೆ ಬರುತ್ತಿದ್ದರು. ಈ ಬಾರಿ ಕಡ್ಡಿರಾಂಪುರಕ್ಕೂ ಮುಂಚೆ ವಾಹನಗಳಿಗೆ ನಿಲ್ದಾಣ ಮಾಡಿದ್ದರಿಂದ ಕುಟುಂಬ ಸಮೇತ ಬರಬೇಕನ್ನುವ ಪ್ರೇಕ್ಷಕರು ಈ ಬಾರಿ ಹಂಪಿ ಉತ್ಸವದಿಂದ ಬಹುತೇಕ ದೂರ ಉಳಿದಿದ್ದಾರೆ ಎಂದು ಪ್ರವಾಸಿಗರು ಹೇಳಿದರು.