ಆರೋಪಿಗಳನ್ನು ಬಂಧಿಸಿ ತ್ವರಿತ ಕ್ರಮ: ಸಿಪಿಐ
ಕೊಟ್ಟೂರು: ಅಂಬಳಿಯಲ್ಲಿ ಶನಿವಾರ ನಡೆದ ಯುವಕನ ಕೊಲೆ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಬಂಧಿಸಿ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಗೆ ಪ್ರಮುಖ ಕಾರಣರೆಂದು ದೂರಲಾಗಿರುವ ಗೌರಿಹಳ್ಳಿ ಮಂಜುನಾಥ ಮತ್ತು ಕೋಟೆಪ್ಪ ಪರಾರಿಯಾಗಿದ್ದಾರೆ. ಇವರನ್ನು ರಕ್ಷಿಸುವ ಪ್ರಯತ್ನ ಖಂಡಿತಾ ಮಾಡಿಲ್ಲ. ತನಿಖೆ ಕೈಗೊಂಡು ತಪ್ಪಿತಸ್ಥರೆಂದು ರುಜುವಾತಾದ ತಕ್ಷಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಯಾರೊಬ್ಬರೂ ಸಂಶಯಪಡುವ ಅಗತ್ಯವಿಲ್ಲ ಎಂದು ಕೊಟ್ಟೂರು ಸಿಪಿಐ ಎಸ್. ಲಾಲ್ಯನಾಯ್ಕ ಹೇಳಿದರು.
ಅವರು ಭಾನುವಾರ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಚಂದ್ರಪ್ಪ ಹೇಳಿಕೆ ಪಡೆಯಲು ಆಗಮಿಸಿದ್ದ ಅವರು, ಅಂಬಳಿ ಗ್ರಾಮದ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನ ನಡೆಸಿದ್ದಾರೆ. ಗ್ರಾಮದಲ್ಲಿನ ಗಲಭೆ ವಿಷಯ ತಿಳಿದ ತಕ್ಷಣ ಕೊಟ್ಟೂರು ಪೊಲೀಸರು ಎಲ್ಲ ಕ್ರಮ ಕೈಗೊಂಡಿದ್ದಾರೆ. ಹಂಪಿ ಉತ್ಸವದ ಬಂದೋಬಸ್ತ್ಗೆಂದು ತಾವು ತೆರಳಿದ್ದರೂ ವಿಷಯ ತಿಳಿಯುತ್ತಲೆ ಕೂಡಲೆ ಧಾವಿಸಿ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಂಡಿರುವೆ. ಗ್ರಾಮಸ್ಥರು ತನಿಖೆಗೆ ಸಹಕಾರ ನೀಡಬೇಕೆಂದರು.
ಘಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಗೌರಿಹಳ್ಳಿ ಮಂಜುನಾಥ ಮತ್ತು ಕೋಟೆಪ್ಪನನ್ನು 8 ಮತ್ತು 9ನೇ ಆರೋಪಿಗಳೆಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇವರು ಎಲ್ಲಿ ಇದ್ದಾರೆ ಎಂಬ ಮಾಹಿತಿ ನೀಡಿದರೆ ನಾನೆ ಖುದ್ದಾಗಿ ಹೋಗಿ ಬಂಧಿಸುತ್ತೇನೆ. ಇದೀಗ ಮರು ದೂರು ಸಲ್ಲಿಸುವುದಾಗಿ ಅಂಬಳಿಯ ಕೆಲವರು ಹೇಳುತ್ತಿದ್ದಾರೆ ಹೊರತು ಇದೂವರೆಗೂ ಯಾರೂ ದೂರು ಸಲ್ಲಿಸಿಲ್ಲ. ಯಾರನ್ನೂ ರಕ್ಷಿಸುವ ಪ್ರಯತ್ನ ಅಂತೂ ನಡೆದಿಲ್ಲ. ಪ್ರಾಮಾಣಿಕವಾಗಿ ತನಿಖೆ ಕೈಗೊಳ್ಳಲಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತನಿಖೆಗೆ ಪೂರಕವಾಗಿ ಸೂಕ್ತ ಸಾಕ್ಷಿ ಪುರಾವೆಗಳನ್ನು ಜನತೆ ನೀಡುವತ್ತ ಮುಂದಾಗಬೇಕು ಎಂದು ಹೇಳಿದರು.
--
ನಾನ್ ಟೆಕ್ನಿಕಲ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ: ಭಾರತೀಯ ವಾಯುಸೇನಾ ಪಡೆಯಲ್ಲಿ ಏರ್ಮನ್ ನಾನ್ ಟೆಕ್ನಿಕಲ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಈಶ್ವರ ಕೊಡೊಳ್ಳಿ ತಿಳಿಸಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನವದೆಹಲಿಯ ಸೆಂಟ್ರಲ್ ಏರ್ಮನ್ ಸೆಲೆಕ್ಷನ್ ಬೋರ್ಡ್ನಿಂದ ಏಪ್ರಿಲ್ 2014ರಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು 1-2-1994 ರಿಂದ 30-11-1997ರೊಳಗಾಗಿ (21 ವರ್ಷ) ಜನಿಸಿದವರಾಗಿರಬೇಕು ಹಾಗೂ ದ್ವಿತೀಯ ಪಿಯುಸಿ ಕಲಾ- ವಿಜ್ಞಾನ-ವಾಣಿಜ್ಯ ವಿಷಯದಲ್ಲಿ ತೇರ್ಗಡೆ ಹೊಂದಿದ್ದು, ಅವಿವಾಹಿತ ಪುರುಷರಾಗಿರಬೇಕು. ಆಸಕ್ತರು ಜನವರಿ 14ರೊಳಗಾಗಿ ಅಧ್ಯಕ್ಷರು, ಸೆಂಟ್ರಲ್ ಏರ್ಮನ್ ಸೆಲೆಕ್ಷನ್ ಬೋರ್ಡ್, ಪೋಸ್ಟ್ ಬಾಕ್ಸ್ ಸಂಖ್ಯೆ 11807, ನವದೆಹಲಿ-110010 ಇವರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ವೆಬ್ ಸೈಟ್ ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ.್ಝಟಿ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25592199 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.