ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ
ಬಳ್ಳಾರಿ: ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯು ನಗರದ ಶೆಟ್ರ ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು.
ಸ್ಪರ್ಧೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಉಮಾಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ಡಿಡಿಪಿಯು ಅಬ್ದುಲ್ ರಶೀದ್ ಪ್ರಾಸ್ತಾವಿಕ ಮಾತನಾಡಿದರು.
ಬಳ್ಳಾರಿಯ ಮುನಿಸಿಪಲ್ ಜೂನಿಯರ್ ಪಿಯು ಕಾಲೇಜ್, ಶ್ರೀ ಉಜ್ಜಯಿನಿ ಜಗದ್ಗುರು ಪಿಯು ಕಾಲೇಜ್, ಶೆಟ್ರಗುರುಶಾಂತಪ್ಪ ಪಿಯು ಕಾಲೇಜ್ ಮತ್ತು ಸಿರುಗುಪ್ಪದ ಸರ್ಕಾರಿ ಪಿಯು ಕಾಲೇಜ್ ಒಟ್ಟು ನಾಲ್ಕು ಕಾಲೇಜುಗಳಿಂದ ಆಯ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪಾತ್ರಗಳಿಗೆ ತಕ್ಕಂತೆ ತಮ್ಮ ತಮ್ಮ ಪ್ರಸ್ತಾವನೆ ಮಂಡಿಸಿ, ಭಾಷಣ ಮಾಡಿದರು.
ಅಂತಿಮವಾಗಿ ಸ್ಪೀಕರ್ ಆಗಿದ್ದ ಎಸ್ಜಿ ಕಾಲೇಜಿನ ಸೀಮಾ ಪ್ರಥಮ ಸ್ಥಾನಗಳಿಸಿದರೆ, ಪ್ರಧಾನಮಂತ್ರಿಯಾಗಿದ್ದ ಸಿರುಗುಪ್ಪ ಸರ್ಕಾರಿ ಪಿಯು ಕಾಲೇಜಿನ ಬಾದಾಮಿ ಭಾಸ್ಕರ್ ದ್ವಿತೀಯ ಸ್ಥಾನ ಗಳಿಸಿದರು. ವಿರೋಧ ಪಕ್ಷದ ನಾಯಕಿಯಾಗಿದ್ದ ಉಜ್ಜಯಿನಿ ಜಗದ್ಗುರು ಪಿಯು ಕಾಲೇಜಿನ ಚಾಂದಿನಿ ತೃತೀಯ ಮತ್ತು ಮುನಿಸಿಪಲ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ನಾಲ್ಕನೇ ಸ್ಥಾನ ಗಳಿಸಿದ್ದಾನೆ. ಕೂಡ್ಲಿಗಿ ಹಿರೇಮಠ ಪಿಯು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಅರವಿಂದ ಕುಲಕರ್ಣಿ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶರಣಬಸವರಾಜ, ಶ್ರೀಶೈಲ, ಕೃಷ್ಣಮೂರ್ತಿ, ಪ್ರಕಾಶ, ನಾಗರೆಡ್ಡಿ ಸೇರಿದಂತೆ ಇತರೆ ಉಪನ್ಯಾಸಕರು ಇದ್ದರು. ಕಾಲೇಜು ಪ್ರಾಚಾರ್ಯ ಪಿ. ಬಸವನಗೌಡ ಸ್ವಾಗತಿಸಿದರು. ನಾಗರೆಡ್ಡಿ ನಿರೂಪಿಸಿದರು. ಬಸವಲಿಂಗಪ್ಪ ವಂದಿಸಿದರು.