ಪ್ರವಾಸ ಶಿಕ್ಷಣದ ಭಾಗವಾಗಲಿ: ಕುಂವೀ
ಹಗರಿಬೊಮ್ಮನಹಳ್ಳಿ: ಪಠ್ಯದ ಜತೆಗೆ ಪ್ರವಾಸ, ಪ್ರವಾಸೋದ್ಯಮ ಶಿಕ್ಷಣದ ಒಂದು ಭಾಗವಾಗಬೇಕು. ಈ ರೀತಿ ಆದಾಗ ಮಾತ್ರ ನಮ್ಮ ನಾಡಿನ ಐತಿಹಾಸಿಕ ತಾಣಗಳು, ಪರಂಪರೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಲಿಕೆ ಹಂತದಲ್ಲಿ ಪ್ರವಾಸವನ್ನು ಒಂದು ಭಾಗವಾಗಿಸುವ ನಿರ್ಧಾರ ಕೈಗೊಳ್ಳಬೇಕೆಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಿಸಿದರು.
ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಎಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಪೀಠದ ರೇಣುಕಾ ಸಮೂಹ ವಿದ್ಯಾಸಂಸ್ಥೆಗಳ ನಾಲ್ಕು ದಿನಗಳ ಶಾಲಾ, ಕಾಲೇಜು ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯಪುಸ್ತಕದ ಗಡಿಮೀರಿ ಮಕ್ಕಳಿಗೆ ಕಲಿಸುವುದು ಅಗತ್ಯವಿದೆ. ಸಿಲಬಸ್ ಮುಗಿಸುವ ಧಾವಂತಕ್ಕೆ ಬಿದ್ದು ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ಹಾಗಂತ ಇಂಗ್ಲಿಷ್ ಬೇಡ ಎನ್ನುವುದಿಲ್ಲ. ವ್ಯವಹಾರಿಕ ಭಾಷೆಯಾಗಿ ಮಾತ್ರ ಇಂಗ್ಲಿಷ್ ಕಲಿತರೆ ಸಾಕು. ಮೂಲತಃ ನಮ್ಮ ಗ್ರಾಮೀಣ ಮಕ್ಕಳಿಗೆ ಇವತ್ತಿನ ಸ್ಪರ್ಧಾ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳಲು ಆಂಗ್ಲಭಾಷೆ ಮುಖ್ಯವಾಗಿದೆ. ಹೀಗಾಗಿ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಕಲಿಸಿದರೆ ಸಾಕು. ಆದರೆ ಆಂಗ್ಲಭಾಷೆ ಪ್ರಭಾವದಲ್ಲಿ ಕನ್ನಡವನ್ನೆ ಅಳಿಸಿ ಹಾಕುವ ಪ್ರಯತ್ನಗಳು ನಡೆದಿರುವುದು ಸರಿಯಲ್ಲ ಎಂದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಹೊ.ಮ. ಪಂಡಿತಾರಾಧ್ಯ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಕೆ.ವಿ.ಎಂ. ನಾಗಭೂಷಣ, ಡಾ. ಬಂಡ್ರಿ ವಿಶ್ವನಾಥ, ಬಣಕಾರ್ ಗೋಣೆಪ್ಪ, ಪ್ರಾಚಾರ್ಯೆ ಕೆ.ಎಂ. ಇಂದುಮತಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಎ.ಎಂ. ಕೊಟ್ರಯ್ಯ ಸ್ವಾಗತಿಸಿದರು. ಅಕ್ಕಿ ಪ್ರಕಾಶ ವಂದಿಸಿದರು. ಬೆಟ್ಟಪ್ಪ ನಿರೂಪಿಸಿದರು.