ಮತ್ತೆ ಮೌನಕ್ಕೆ ಶರಣಾದ ಹಂಪಿ
ಮೂರು ದಿನಗಳ ಕಾಲ ಹಂಪಿಯ ಗತ ವೈಭವವನ್ನು ನೆನಪಿಸಿಕೊಡುವ ಸಾಂಸ್ಕೃತಿಕ ಕಲಾ ವೈಭವದಿಂದ ಕೂಡಿದ್ದ ಹಂಪಿ ಉತ್ಸವದ ಮರು ದಿನ ಪ್ರವಾಸಿಗರನ್ನು ಹೊರತುಪಡಿಸಿ ಹಂಪಿ ಬಿಕೋ ಎನ್ನುತ್ತಿತ್ತು.
ಅತ್ತ ಉತ್ಸವದ ವೇದಿಕೆಗಳ ತೆರವು, ಸ್ವಚ್ಛತಾ ಕಾರ್ಯ ಕಾರ್ಮಿಕರಿಂದ ನಡೆಯುತ್ತಿದ್ದರೆ ಇತ್ತ ಮಯೂರು ಭುವನೇಶ್ವರಿಯಲ್ಲಿ ಮಾತ್ರ ಹಂಪಿ ಬೈ ಸ್ಕೈನ ಹೆಲಿಕಾಪ್ಟರ್ಗಳು ಹೆಚ್ಚು ಬೇಡಿಕೆಯೊಂದಿಗೆ ಆಗಸದಲ್ಲಿ ಹಾರಾಡುತ್ತಿದ್ದವು.
ಇದು ಸೋಮವಾರ ಹಂಪಿಗೆ ಭೇಟಿ ಕೊಟ್ಟಾಗ ಕಂಡು ಬಂದ ದೃಶ್ಯಗಳು. ಅಧಿಕಾರಿಗಳ ಉತ್ಸವವೆಂಬ ಆರೋಪಗಳ ನಡುವೆ ಕೊನೆಯ ಎರಡು ದಿನಗಳಲ್ಲಿ ಅದು ಜನರ ಉತ್ಸವವಾಗಿದ್ದು ಮಾತ್ರ ವಿಶೇಷ. ರು. 7.30 ಕೋಟಿ ವೆಚ್ಚದಲ್ಲಿ ಶ್ರೀಕೃಷ್ಣದೇವರಾಯ ವೇದಿಕೆ, ಎಂ.ಪಿ. ಪ್ರಕಾಶ್ ವೇದಿಕೆ, ವಿದ್ಯಾರಣ್ಯರ ವೇದಿಕೆ, ಹಕ್ಕಬುಕ್ಕ ವೇದಿಕೆಗಳಲ್ಲಿ ಮೂರು ದಿನಗಳ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದಿದ್ದವು. ಆದರೆ ಮೂರು ದಿನ ಸಂಜೆ ಹೊತ್ತಿಗೆ ಇದ್ದ ವಿದ್ಯುದ್ದೀಪಾಲಂಕಾರ ಸೋಮವಾರ ಇರಲಿಲ್ಲ.
ದೂರ ದೂರುಗಳಿಂದ ಆಗಮಿಸಿದ್ದ ಜನರು ಮೂರು ದಿನಗಳ ಉತ್ಸವದ ಕ್ಷಣಗಳನ್ನು ಮೆಲುಕು ಹಾಕುತ್ತ ತಮ್ಮ ಊರಿನತ್ತ ಪಯಣ ಬೆಳೆಸಲು ಮುಂದಾಗಿದ್ದುದು ಒಂದೆಡೆಯಾದರೆ ಹಂಪಿ ಉತ್ಸವದ ಸಡಗರ, ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ಚೀನಾ, ಜರ್ಮನಿ, ಫ್ರಾನ್ಸ್, ಅಮೆರಿಕ, ಯುರೋಪ್ ದೇಶಗಳು ಸೇರಿದಂತೆ ವಿದೇಶಿ ಪ್ರವಾಸಿಗರು ಮುಂದಿನ ಪ್ರವಾಸಿ ತಾಣದತ್ತ ಹೆಜ್ಜೆ ಹಾಕುತ್ತಿದ್ದರು.
ಹಂಪಿ ಬೈ ಸ್ಕೈಗೆ ಬೇಡಿಕೆ: ಆದರೆ ಮೂರು ದಿನ ಮಾತ್ರ ವ್ಯವಸ್ಥೆ ಮಾಡಿದ್ದ ಹಂಪಿ ಬೈ ಸ್ಕೈ ಸೋಮವಾರವೂ ತನ್ನ ಬೇಡಿಕೆ ಉಳಿಸಿಕೊಂಡಿತ್ತು. 1000 ಟಿಕೆಟ್ ಬುಕ್ಕಾಗಿದ್ದರೂ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರವೂ ಎರಡು ಹೆಲಿಕಾಪ್ಟರ್ಗಳು ಪ್ರವಾಸಿಗರಿಗೆ ಹಂಪಿ ಸ್ಮಾರಕಗಳ ಪ್ರದಕ್ಷಿಣೆ ಹಾಕಿಸಿತು. ಸೋಮವಾರದವರೆಗೆ ಸುಮಾರು 1200ಕ್ಕೂ ಹೆಚ್ಚು ಜನರು ಹಂಪಿ ಬೈ ಸ್ಕೈನಲ್ಲಿ ಆಕಾಶದಿಂದ ಐತಿಹಾಸಿಕ ಹಂಪಿ ನೋಡಿದರು. ಇನ್ನು ಬೇಡಿಕೆ ಇದ್ದರೂ ಸೋಮವಾರಕ್ಕೆ ಕೊನೆಗೊಳಿಸಲಾಯಿತು.
ಮಯೂರು ಭುವನೇಶ್ವರಿಯಲ್ಲಿ ಮಾತ್ರ ಹಂಪಿ ಉತ್ಸವದ ಕಳೆ ಸೋಮವಾರ ಇತ್ತು. ಸೋಮವಾರ ಸಂಜೆ ಲೋಹದ ಹಕ್ಕಿಗಳ ಹಾರಾಟ ಕೊನೆಗೊಳ್ಳುತ್ತಿದ್ದಂತೆ ಉತ್ಸವಕ್ಕೆ ತೆರೆ ಬಿತ್ತು.
ವೇದಿಕೆಗಳ ತೆರವು ಕಾರ್ಯ: ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿದ್ದ ನಾಲ್ಕು ವೇದಿಕೆಗಳು, ಮೀಡಿಯಾ ರೂಂ, ವಿವಿಐಪಿಗಳ ರೆಸ್ಟ್ ರೂಂಗಳ ತೆರವು ಕಾರ್ಯಾಚರಣೆ ನಡೆದಿತ್ತು. ಮೂರು ದಿನಗಳ ಕಾಲ ವಾದ್ಯ ವೃಂದಗಳು, ಸಾವಿರಾರು ಜನರಿಂದ ಕಂಗೊಳಿಸುತ್ತಿದ್ದ ಹಂಪಿ ಸೋಮವಾರ ನೀರವ ಮೌನದಿಂದ ಆವರಿಸಿತ್ತು. 2200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದು, ಏಳೆಂಟು ದಿನಗಳಿಂದ ಹಂಪಿ ಉತ್ಸವದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಸೋಮವಾರ ತಮ್ಮ ತಮ್ಮ ಠಾಣೆಗೆ ಮರಳಿದರು. ಹಂಪಿ ಉತ್ಸವ ಸಿದ್ಧತೆಗಾಗಿ ಹಂಪಿಯಲ್ಲಿ ಮೊಕ್ಕಂ ಹೂಡಿದ್ದ ಉತ್ಸವದ ಸಮಿತಿಯ ಅಧಿಕಾರಿಗಳು ಜಿಲ್ಲಾ ಕೇಂದ್ರಕ್ಕೆ, ತಾಲೂಕು ಕೇಂದ್ರಕ್ಕೆ ವಾಪಾಸಾದರು.
ಬರೀ ಕತ್ತಲೆ: ರಾಜ್ಯದ ವಿವಿಧ ಜಿಲ್ಲೆಗಳಿಂದ, ವಿದೇಶದ ಪ್ರವಾಸಿಗರು ಹಂಪಿ ಉತ್ಸವದಲ್ಲಿ ಅಲ್ಲಲ್ಲಿ ಬಿಸಾಡಿದ ಊಟದ ಪೊಟ್ಟಣಗಳು, ಕಾಗದಗಳು ಸೇರಿದಂತೆ ಸ್ವಚ್ಛತೆ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಮಿಕರಿಂದ ಮಾಡಿಸಿದರು. ವೇದಿಕೆ ತೆರವು ಕಾರ್ಯವೂ ನಡೆದಿತ್ತು.
ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಾನಸುಧೆ ಇದ್ದ ಹಂಪಿಯಲ್ಲಿ ಸೋಮವಾರ ರಾತ್ರಿ ಹುಳ ಹುಪ್ಪಟೆಗಳ ಸಣ್ಣದಾದ ದನಿ ಮಾತ್ರ ಇತ್ತು. ಜಗಮಗಿಸುತ್ತಿದ್ದ ವಿದ್ಯುತ್ ದೀಪಗಳು ಇಲ್ಲದೆ ಕತ್ತಲೆ ಆವರಿಸಿತ್ತು.
14ನೇ ಶತಮಾನದ ಗತ ವೈಭವವನ್ನು ಹಂಪಿ ಉತ್ಸವದ ಹೆಸರಿನಲ್ಲಿ ಮೂರು ದಿನ ಕಟ್ಟಿ ಕೊಟ್ಟಂತಹ ಸಂಗೀತ, ಸಾಹಿತ್ಯ, ನೃತ್ಯದ ಮೆರಗನ್ನು ಉತ್ಸವಕ್ಕೆ ಆಗಮಿಸಿದ್ದ ಜನರು ಮೆಲುಕು ಹಾಕುವಂತೆ ಮಾಡಿತ್ತು. ಈಗ ಪ್ರವಾಸಿಗರಿಗೆ ಹಂಪಿಯು ತನ್ನ ಸ್ಮಾರಕಗಳ ಮುದ ನೀಡಲಿದ್ದು, ಮುಂದಿನ ಉತ್ಸವದಲ್ಲಿ ಸಾಹಿತ್ಯ, ಸಂಗೀತದ ರಸದೌತಣ ನೀಡಲಿದೆ.