ಕಂಗೊಳಿಸಿದ ರಂಗೋಲಿ: ಸಂಭ್ರಮದ ಸಂಕ್ರಾಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 14
ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಜನತೆ ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ನಿಮಿತ್ತ ಬೆಳಗ್ಗೆ ಎಳ್ಳು ನೀರಿನ ಪುಣ್ಯಸ್ನಾನ ಮಾಡಿ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಮನೆ ಮುಂದೆ ಚಿತ್ತ ಚಿತ್ತಾರದ ರಂಗೋಲಿ ಎಲ್ಲೆಡೆ ಕಾಣುತ್ತಿತ್ತು. ಹಬ್ಬಕ್ಕಾಗಿ ತರಹೇವಾರಿ ಅಡುಗೆಗಳನ್ನು ಮಾಡಿ, ನಗರ ಪ್ರದೇಶದ ಜನತೆ ಪಾರ್ಕ್‌ಗಳಿಗೆ ಊಟಕ್ಕಾಗಿ ಹೋದರೆ, ಗ್ರಾಮೀಣರು ಹೊಲ, ಮನೆಯಲ್ಲೆ ಸಿಹಿ ಊಟ ಸವಿದರು. ಆ ಮೂಲಕ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ಮನೆಯ ಅಂಗಳದಲ್ಲಿ ಸಂಪ್ರದಾಯದಂತೆ ಸಗಣಿಯಿಂದ ಮಾಡಿದ ಬೊಮ್ಮಪ್ಪಗಳನ್ನು ಮಾಡಿ ಬಾಗಿಲು ಮುಂದೆ ಇಟ್ಟು, ಮನೆಯಲ್ಲಿ ಹಿರಿಯರು ಮತ್ತು ಮಕ್ಕಳು ನಿಂತು ಕುಂಬಳಕಾಯಿ ಹೊಡೆದು ಕುಂಬಳಿಕಾಯಿ ಪಲ್ಲೆ ಸೇರಿದಂತೆ ನಾಲ್ಕು ಜನರಿಗೆ ದವಸ ಧಾನ್ಯಗಳನ್ನು ದಾನ ಮಾಡುವ ಮೂಲಕ ಸಂಕ್ರಮಣ ಹಬ್ಬ ಆಚರಿಸಲಾಯಿತು. ಇನ್ನು ಬಳ್ಳಾರಿ ನಗರದ ಕೆಲವೆಡೆ ಸಂಕ್ರಮಣ ಹಬ್ಬದ ಅಂಗವಾಗಿ ಮಹಿಳೆಯರಿಗೆ, ಯುವತಿಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮನೆಯಲ್ಲಿ ರೊಟ್ಟಿ, ಎಳ್ಳು, ಶೇಂಗಾ ಹೋಳಿಗೆ ಮಾಡಿಕೊಂಡು ನಾಲ್ಕಾರು ಜನರಿಗೆ ಹಂಚಿ ತಾವು ತಿಂದು ಸಂತೋಷಪಟ್ಟರು. ಸಂಕ್ರಮಣ ಅಂಗವಾಗಿ ಈ ಭಾಗದಲ್ಲಿ ವಿಶೇಷವಾಗಿ ಸಿಹಿ ಉಂಡೆ, ಎಳ್ಳುರೊಟ್ಟಿ ಮಾಡುವುದು ಇದೆ. ಪ್ರತಿ ಮನೆಗಳಲ್ಲಿ ಇವುಗಳನ್ನು ಮಾಡಿ, ಹಬ್ಬ ಆಚರಿಸಿದರು. ಮನೆ ಅಂಗಳದಲ್ಲಿ ಹಾಕಿದ್ದ ಚಿತ್ತಾರದ ಬಣ್ಣದ ರಂಗೋಲಿಗಳು ನೋಡುಗರನ್ನು ಆಕರ್ಷಿಸುತ್ತಿದ್ದವು. ಕೆಲವರು ಮಂಗಳವಾರ ಸಂಕ್ರಾಂತಿ ಹಬ್ಬ ಆಚರಿಸಿದರೆ, ಇನ್ನು ಕೆಲವರು ಬುಧವಾರ ಹಬ್ಬ ಆಚರಿಸಲಿದ್ದಾರೆ.
ಸಡಗರದ ಸಂಕ್ರಾಂತಿ ಆಚರಣೆ
ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಮಂಗಳವಾರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಿದರು. ಬೆಳಗ್ಗೆಯಿಂದ ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ಪಕ್ಕದ ಪುಣ್ಯಕ್ಷೇತ್ರಗಳಾದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಹಾಗೂ ಮದಲಗಟ್ಟಿಯ ಶ್ರೀ ಪ್ರಾಣ ಅಂಜನೇಯಸ್ವಾಮಿದೇವಸ್ಥಾನಗಳಿಗೆ ಬೆಳಗಿನ ಜಾವವೆ ಪರಿವಾರ ಸಮೇತರಾಗಿ ತೆರಳಿದ ತುಂಗಾಭದ್ರಾ ನದಿ ಯಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಇನ್ನು ಕೆಲವರು ಪ್ರತಿವರ್ಷದಂತೆ ದೂರದ ಕೂಡಲಸಂಗಮ, ಧರ್ಮಸ್ಥಳ, ಶ್ರೀಶೈಲ ಸೇರಿದಂತೆ ನಾನಾ ಕಡೆಗಳಿಗೆ ತೆರಳಿ ಮಕರ ಸಂಕ್ರಾಂತಿ ಆಚರಿಸಿದರು. ಈ ಮಧ್ಯೆ ಸಂಕ್ರಾಂತಿ ಆಚರಣೆ ಸಂಬಂಧ ಗೊಂದಲ ಮುಂದುವರಿದಿದ್ದು ಕೆಲವರು ಮಂಗಳವಾರ ಹಬ್ಬ ಆಚರಿಸಿದರೆ, ಇನ್ನು ಹಲವರು ಬುಧವಾರ ಆಚರಿಸುತ್ತಾರೆ. ಹೀಗಾಗಿ ಈ ಸಲ ತಾಲೂಕಿನಲ್ಲಿ ಎರಡು ದಿನ ಹಬ್ಬ ಆಚರಣೆ ನಡೆಯುತ್ತಿದೆ.
ಹಂಪಿ: ಮಕರ ಸಂಕ್ರಾಂತಿ ಪುಣ್ಯಸ್ನಾನಮಕರ ಸಂಕ್ರಾಂತಿ ನಿಮಿತ್ತ ವಿಶ್ವ ವಿಖ್ಯಾತ ಹಂಪಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೆ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು. ಪ್ರತಿವರ್ಷದಂತೆ ಈ ಭಾಗದ ಪ್ರಸಿದ್ಧ ಮತ್ತು ಐತಿಹಾಸಿಕ ಪುಣ್ಯಸ್ಥಳವಾದ ಹಂಪಿಗೆ ನಾಡಿನ ವಿವಿಧ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಭಕ್ತರು ಆಗಮಿಸಿ ಹಬ್ಬದ ಪುಣ್ಯಸ್ನಾನ ಮಾಡಿದರು. ಆ ಮೂಲಕ ಸಂಕ್ರಾಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆಯಿಂದಲೆ ನದಿಯಲ್ಲಿ ಸಾವಿರಾರು ಭಕ್ತರು ಸ್ನಾನ ಮಾಡಿ ಅಲ್ಲಿಯೆ ಇರುವ ಶ್ರೀ ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದರು. ನಂತರ ಹಂಪಿಯಲ್ಲಿ ವಿವಿಧ ದೇವಾಲಯ, ಸ್ಮಾರಕಗಳನ್ನು ವೀಕ್ಷಿಸಿ, ಹಂಪಿಯ ವಿವಿಧ ಕಡೆ ಇರುವ ಪಾರ್ಕ್, ದೇವಾಲಯ ಬಳಿ ಕುಟುಂಬ ಸಮೇತರಾಗಿ ಕುಳಿತು ತಾವು ತಂದಿದ್ದ ಸಿಹಿ ಊಟವನ್ನು ಮಾಡಿದರು. ಇನ್ನು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಅನೇಕ ಭಕ್ತರು ಧನುರ್ಮಾಸ ಪೂಜೆ ಸಲ್ಲಿಸಿ, ಪೊಂಗಲ್ ನೈವೇದ್ಯ ಅರ್ಪಿಸಿದರು. ಹಂಪಿಯ ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಮಂಗಳವಾರ ಪುಣ್ಯಸ್ನಾನ ಮಾಡಲು ಅನುಕೂಲವಾಯಿತು. ಈ ಬಾರಿ ಎರಡು ದಿನ ಹಬ್ಬ ಬಂದಿರುವ ಕಾರಣ ಬುಧವಾರವೂ ಸಾವಿರಾರು ಭಕ್ತರು ಬುಧವಾರ ಹಂಪಿಯಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಿದ್ದಾರೆ. ಅದರಂತೆ ಹಬ್ಬವನ್ನು ಹೊಸಪೇಟೆ ನಗರ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮಂಗಳವಾರ ಆಚರಿಸಿದರು. ಗ್ರಾಮಗಳಲ್ಲಿ ಜನತೆ ಹಬ್ಬವನ್ನು ಸರಳವಾಗಿ ಆಚರಿಸಿದರು.