ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ: ಉದಯ್
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 14
ತಾಲೂಕು ಕಾಂಗ್ರೆಸ್‌ನಲ್ಲಿ ಯಾವುದೆ ಭಿನ್ನಮತವಿಲ್ಲ. ಎಲ್ಲವೂ ಸರಿಯಾಗಿಯೆ ಇದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಈಗಿನಿಂದಲೆ ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಿವಿಧ ಘಟಕಗಳ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಎಸ್ಟಿ ಮೀಸಲು ಕ್ಷೇತ್ರಕ್ಕೆ ಬಹುತೇಕ ಎನ್.ವೈ. ಹನುಮಂತಪ್ಪ ಅವರ ಹೆಸರು ಅಂತಿಮಗೊಳ್ಳುವ ನಿರೀಕ್ಷೆಯಿದೆ. ಹಾಗೊಂದು ವೇಳೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಶ್ರಮಿಸಲು ಮುಂದಾಗುವಂತೆ ತಿಳಿಸಿದರು.
ತಾಲೂಕಿನಲ್ಲಿ ಪಕ್ಷದ ಮುಖಂಡರಲ್ಲಿ ಯಾವುದೆ ಗುಂಪುಗಾರಿಕೆ ಬೇಡ ಎಂಬ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರ ಸಲಹೆಯನ್ನು ಎಲ್ಲರೂ ಪಾಲಿಸಬೇಕಿದೆ. ಹಾಗಾಗಿ ಈ ಸಭೆಗೆ ಎಲ್ಲ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷ ಎನ್. ಮುದ್ದಪ್ಪ ಮಾತನಾಡಿ, ಕೂಡ್ಲಿಗಿ ಕ್ಷೇತ್ರ ಯಾವತ್ತಿಗೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಳೆದೆರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದನ್ನು ನೆನೆಯುತ್ತಲೆ ಈ ಬಾರಿ ಎಂಪಿ ಅಭ್ಯರ್ಥಿಯಾಗಿ ಎನ್.ವೈ. ಹನುಮಂತಪ್ಪ ಕಣಕ್ಕಿಳಿಸುವುದಾಗಿ ಹೈಕಮಾಂಡ್ ನಿರ್ಧರಿಸಿದೆ. ಅಂತಹ ಬುದ್ಧಿವಂತರನ್ನು ಆರಿಸಿ ತಂದರೆ ಕ್ಷೇತ್ರದ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಮತ ನೀಡುವ ಮೂಲಕ ದಾಖಲೆ ನಿರ್ಮಿಸಲು ಪ್ರತಿಯೊಬ್ಬ ಕಾರ್ಯಕರ್ತರು ಸಜ್ಜುಗೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ವಿವಿಧ ಘಟಕಗಳ ಹುದ್ದೆಗಳ ಜವಾಬ್ದಾರಿ ನೀಡಿರುವುದು ಯಾವುದೆ ಶೋಕಿಗಲ್ಲ, ಇದು ಕಠಿಣ ಹಾದಿಯಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವಿದ್ದರೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುತ್ತಿಲ್ಲ. ಅದಕ್ಕಾಗಿ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ತಾಲೂಕು ಕಾಂಗ್ರೆಸ್ ಯುವ ಘಟಕದ ನೂತನ ಅಧ್ಯಕ್ಷ ಮಲ್ಲಾಪುರ ರಾಘವೇಂದ್ರ, ಉಪಾಧ್ಯಕ್ಷ ಎಸ್. ನೌಷಾದ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ತಾಲೂಕು ಸೇವಾದಳ ಅಧ್ಯಕ್ಷ ಎನ್. ಕರಿಬಸಪ್ಪ, ಜಿಲ್ಲಾ ಸೇವಾದಳ ಉಪಾಧ್ಯಕ್ಷ ವಿಭೂತಿ ವೀರಣ್ಣ ಹಾಗೂ ಎಸ್ಸಿ ಘಟಕ ಅಧ್ಯಕ್ಷ ಮಹೇಶ್ ಇವರನ್ನು ಮುಖಂಡರು ಗೌರವಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಿರೇಕುಂಬಳಗುಂಟೆ ಉಮೇಶ್, ಕಾವಲ್ಲಿ ಶಿವಪ್ಪನಾಯಕ, ಸಿ.ಬಿ. ಜಯರಾಂ ನಾಯಕ, ಬಿ. ಮರಿಯಪ್ಪ, ವೀರಭದ್ರಪ್ಪ, ಬೊಮ್ಮಗಟ್ಟ ಪಂಪಾಪತಿ, ದುರ್ಗಾದಾಸ್ ಇತರರಿದ್ದರು.