ಶೈತ್ಯಾಗಾರಕ್ಕೆ ಬೆಂಕಿ: ರು. 20 ಕೋಟಿಗೂ ಹೆಚ್ಚು ಹಾನಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 14
ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಳ್ಳಾರಿಯ ಕೈಗಾರಿಕಾ ಪ್ರದೇಶದಲ್ಲಿರುವ 6 ಅಂತಸ್ತಿನ ಶ್ರೀದೇವಿ ಶೈತ್ಯಾಗಾರ ಬೆಂಕಿಗೆ ಆಹುತಿಯಾಗಿ ಸುಮಾರು ರು. 20 ಕೋಟಿಗೂ ಹೆಚ್ಚು ಹಾನಿಯಾಗಿದೆ.
ಶೈತ್ಯಾಗಾರದಲ್ಲಿನ ಸಾವಿರಾರು ಚೀಲಗಳಲ್ಲಿನ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಇನ್ನು 3-4 ದಿನ ನಡೆಯುವ ಸಾಧ್ಯತೆ ಇದೆ.
ತಿಮ್ಮಾರೆಡ್ಡಿ, ಬೋಗೇಶ್ ರೆಡ್ಡಿ, ಕೆ.ವಿ. ತಿಮ್ಮಾರೆಡ್ಡಿ, ಎಚ್. ಅಭಿನಾಶ್ ಅವರಿಗೆ ಸೇರಿದ ಶೈತ್ಯಾಗಾರ ಎಂದು ಹೇಳಲಾಗುತ್ತಿದೆ. ಮಂಗಳವಾರ ಸಂಜೆವರೆಗೂ ದೂರು ನೀಡಿರಲಿಲ್ಲ. 14,241 ಚದರ ಅಡಿ ವಿಸ್ತೀರ್ಣ ಇದ್ದು, 60 ಅಡಿ, 6 ಅಂತಸ್ತಿನ ಶೈತ್ಯಾಗಾರ ಇದಾಗಿದೆ. 50 ಸಾವಿರ ಚೀಲಗಳ ಬ್ಯಾಡಗಿ ಮೆಣಸಿನಕಾಯಿ, 10 ಸಾವಿರ ಕಡ್ಲೆ ಚೀಲ, 5 ಸಾವಿರ ದನಿಯಾ ಚೀಲ, 5 ಸಾವಿರ ಹುಲ್ಲು ಬೀಜ ಸೇರಿದಂತೆ ಸಾವಿರಾರು ಚೀಲಗಳು ಬೆಂಕಿಗೆ ಆಹುತಿಯವಾಗಿವೆ. ಶೈತ್ಯಾಗಾರ ಹಾಗೂ ಅದರಲ್ಲಿರುವ ಯಂತ್ರಗಳೇ ರು. 5 ಕೋಟಿ ಬೆಲೆಬಾಳುತ್ತಿದ್ದು, ಇನ್ನು ಅಲ್ಲಿರುವ ಆಹಾರ ಧಾನ್ಯಗಳು ಸೇರಿದಂತೆ ಒಟ್ಟು ರು. 20 ಕೋಟಿಗೂ ಹೆಚ್ಚು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಮಂಗಳವಾರ ಬೆಳಗಿನಜಾವ 1 ಗಂಟೆ ಸುಮಾರಿಗೆ ಶೈತ್ಯಾಗಾರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆ. ಆರು ಅಂತಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೆಣಸಿನಕಾಯಿ ಘಾಟು ಆವರಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಶೈತ್ಯಾಗಾರದ ಮೇಲೆ ವಿಮೆ ಇರುವುದರಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಕಡಲೆ, ದನಿಯಾ ಬೆಳೆ ಕಡಿಮೆ, ಇದೀಗ ಆ ಧಾನ್ಯಗಳೇ ಬೆಂಕಿಗೆ ಆಹುತಿಯಾಗಿರುವುದು ಅಲ್ಲಿ ಧಾನ್ಯ ಸಂಗ್ರಹಿಸಿಟ್ಟಿರುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
2013, ಜೂ. 2ರಂದು ಕೈಗಾರಿಕಾ ಪ್ರದೇಶದಲ್ಲಿ ಸಾಯಿ ಬಾಲಾಜಿ ಶೈತ್ಯಾಗಾರ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗೆ ಆಹುತಿಯಾಗಿತ್ತು. ಆ ದುರಂತ ಮರೆಯಾಗುವ ಮುನ್ನವೇ ಬಳ್ಳಾರಿ ಕೈಗಾರಿಕೆ ಪ್ರದೇಶದಲ್ಲಿರುವ ಶ್ರೀದೇವಿ ಶೈತ್ಯಾಗಾರ ಬೆಂಕಿಗೆ ಆಹುತಿಯಾಗಿದೆ. ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿರುವುದರಿಂದ ಬೆಂಕಿನಂದಿಸಲು ಕಷ್ಟವಾಗುತ್ತಿದೆ. ಈಗಾಗಲೇ 7ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ 30ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಕಿ ನಂದಿಸಲು ಹುಬ್ಬಳ್ಳಿಯಿಂದ ಬ್ರಾಂಟೋ ಸ್ಕೈ ಲಿಫ್ಟ್ ವಾಹನವನ್ನು ತರಿಸಲಾಗಿದೆ. ಈ ಯಂತ್ರದಿಂದ 70 ಅಡಿ ಎತ್ತರದಿಂದ ಬೆಂಕಿಯನ್ನು ನಂದಿಸಬಹುದಾಗಿದೆ. ದಟ್ಟವಾದ ಹೊಗೆ ಬರುವುದರಿಂದ ಈ ಯಂತ್ರದಿಂದ ಬೆಂಕಿ ನಿಯಂತ್ರಿಸಲು ಮುಂದಾಗಿದ್ದಾರೆ. ಮೆಣಸಿನಕಾಯಿ ಘಾಟು ಇರುವುದರಿಂದ ಉಸಿರಾಟ ಉಪಕರಣಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಅಗ್ನಿಶಾಮಕದಳಕ್ಕೆ ಬೇಕಾಗುವ ನೀರಿಗಾಗಿ ಮಹಾನಗರ ಪಾಲಿಕೆ, ಅರಣ್ಯ ಇಲಾಖೆಯ ವಾಟರ್ ಟ್ಯಾಂಕರ್ಗಳನ್ನು ಬಳಸಿಕೊಳ್ಳಲಾಗಿದೆ. ಇನ್ನು ಖಾಸಗಿ ವಾಟರ್ ಟ್ಯಾಂಕ್ಗಳ ಸಹಾಯದಿಂದ ಅಗ್ನಿಶಾಮಕ ಯಂತ್ರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ನರಸಿಂಹಮೂರ್ತಿ ಅವರು ಘಟನೆಯ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಇನ್ನು ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಬಳ್ಳಾರಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಈಶ್ವರ ನಾಯಕ್, ಸಬ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಟ್ಟಡದ ಎಲ್ಲ ಮಹಡಿಗಳು ಶಿಥಿಲಗೊಂಡಿರುವುದರಿಂದ ಕಟ್ಟಡದ ಬಲಭಾಗ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆಯಿದೆ. ಬಳ್ಳಾರಿ ಮಾತ್ರವಲ್ಲದೇ ಜಿಲ್ಲೆಯ ಬೇರೆ ತಾಲೂಕುಗಳಿಂದ ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.