ಸುದ್ದಿ ಸಂಕ್ಷೇಪ
ಎಸ್ಡಿಎಂಸಿ ರಚನೆ
ಕುರುಗೋಡು: ಪಟ್ಟಣಕ್ಕೆ ಸಮೀಪದ ಸಿರಿಗೇರಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಡಿಎಂಸಿ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ಎಸ್.ಎಂ. ನಾಗರಾಜಸ್ವಾಮಿ ನೇಮಕಗೊಂಡಿದ್ದಾರೆ. ಸದಸ್ಯರಾಗಿ ಫಾತಿಮಾ, ಸುಮಿತ್ರಮ್ಮ, ಯಶೋದಾ, ಬಡವಲಿಸಾಬ್, ಜಿ. ಎರ್ರಿಸ್ವಾಮಿ, ಬಸಯ್ಯಸ್ವಾಮಿ, ಮಾಸ್ತಿ ಪ್ರಕಾಶ್, ಬಿ. ಲಿಂಗೇಶ, ರಾಜಣ್ಣ, ಅನ್ವರ್ ಬಾಷಾ, ವೀರೇಶ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದ್ಯೋಗ ಕಲ್ಪಿಸಿ: ಒತ್ತಾಯ
ಕುರುಗೋಡು: ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳ ವಿದ್ಯಾವಂತ ನಿರುದ್ಯೋಗಿಗಳಿಗೆ 371 (ಜೆ) ಅಡಿ ಕೂಡಲೆ ಉದ್ಯೋಗ ಸೃಷ್ಟಿಸಬೇಕು ಎಂದು ಹೈಕ ಹೋರಾಟ ಸಮಿತಿ ಮುಖಂಡ ಟಿ.ಜಿ. ವಿಠ್ಠಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಹೈಕ ಪ್ರದೇಶದ ನಿರುದ್ಯೋಗಿ ಯುವಕರ ಸಮಾವೇಶದಲ್ಲಿ ಅವರು ಮಾತನಾಡಿ, ಆರು ಜಿಲ್ಲೆಗಳಲ್ಲಿ 23,500 ನಿರುದ್ಯೋಗಿಗಳಿದ್ದಾರೆ ಎಂದು ರಾಜ್ಯ ಸರ್ಕಾರ ನಡೆಸಿದ ಗಣತಿ ಹೇಳುತ್ತಿದೆ. ಆದರೆ ಅವರು ನಡೆಸಿರುವ ಗಣತಿ ಅವೈಜ್ಞಾನಿಕವಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಕೂಡಲೆ ವೈಜ್ಞಾನಿಕವಾಗಿ ಮರು ಗಣತಿ ಮಾಡಿಸುವಂತೆ ಆಗ್ರಹಿಸಿದರು. ವಿ.ಎಸ್. ಶಿವಶಂಕರ್ ಮಾತನಾಡಿ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ರಾಜ್ಯ ಸರ್ಕಾರ ಕೆಲ ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ. ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರಯಾಣ ಮಾಡುವ ಶಾಸಕರಿಗೆ ವೆಚ್ಚ ಭರಿಸಲು ಸರ್ಕಾರದ ಬೊಕ್ಕಸದಲ್ಲಿ ಹಣವಿದೆ. ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲು ಹಣವೂ ಇಲ್ಲ, ಸಮಯವೂ ಇಲ್ಲ ಎಂದು ವ್ಯಂಗ್ಯವಾಡಿದರು. ಹೋರಾಟ ಸಮಿತಿ ಮುಖಂಡ ಚನ್ನಬಸವ, ಸಿಐಟಿಯು ಮುಖಂಡ ಸತ್ಯಬಾಬು ಮಾತನಾಡಿದರು. ಗುರುಸ್ವಾಮಿ, ಚಾನಾಳು ಆನಂದ, ಎಚ್.ಎಂ. ವಿಶ್ವನಾಥಸ್ವಾಮಿ, ಮಹ್ಮದ್ ಖಾನ್, ಎನ್.ಎಂ. ನಾಗಯ್ಯಸ್ವಾಮಿ, ಗಾಳಿ ಬಸವರಾಜ, ಹುಲುಗಪ್ಪ, ಬಸವರಾಜ, ಎಚ್.ಎಂ. ವಿನೋದ್ಕುಮಾರ್, ಉಪಾಧ್ಯಕ್ಷ ಬಿ. ಸತೀಶ್, ಚನ್ನಬಸವರಾಜ ಯಲ್ಲಾಪುರ, ಸಿದ್ದಪ್ಪ, ವಿನೋದ, ಸಂಧ್ಯಾ, ಅರ್ಚನಾ, ಎರ್ರೆಮ್ಮ, ಗಿರಿ, ಮಾಬಾಷಾ, ಮೌಲಾಲಿ ಇದ್ದರು.
ನೂತನ ಅಧ್ಯಕ್ಷರ ಆಯ್ಕೆ
ಬಳ್ಳಾರಿ: ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿಯ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಗರದ ಪೊಲೀಸ್ ಜಿಮಖಾನದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಜೆಸಿ ಪವನ್ಕುಮಾರ್ ನೇಮಕವಾದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ ಭಾಗವಹಿಸಿ ಮಾತನಾಡಿದರು. ತಿರುಮಲ ಶೆಟ್ಟಿ, ರಾಜಾಭಕ್ಷಿ, ದಾಮೋದರ್, ಚಂದ್ರಶೇಖರ್, ಎಸ್.ಪಿ. ವೆಂಕಟೇಶ್, ಎಚ್.ಎಸ್. ರಾಘವೇಂದ್ರ ಅರಸ್, ವಟ್ಟಂ ನಾಗೇಶ್, ಮಲ್ಲಿಕಾರ್ಜುನ, ಲೀಲಾ ಮಲ್ಲಿಕಾರ್ಜುನ, ವಟ್ಟಂ ಆದಿತ್ಯ, ಗೋಪಿಕೃಷ್ಣ, ರಘುಪ್ರಸಾದ್, ವಹಿದಾ, ಚಂದನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.
ನಮಗೆ ನಾವು ಒಳ್ಳೆಯರಾಗಬೇಕು: ರಮೇಶ್
ಬಳ್ಳಾರಿ: ಅನ್ಯರಿಗೆ ಉತ್ತಮನಾಗುವುದಕ್ಕಿಂತ ನಮಗೆ ನಾವು ಮೊದಲು ಒಳ್ಳೆಯರಾಗಬೇಕು. ಯುವ ಸಮೂಹ ಚಾರಿತ್ರೆ, ಶೀಲವಂತರಾದಾಗ ಮಾತ್ರ ದೇಶ ಆರೋಗ್ಯಕರವಾಗಿ ಸದೃಢವಾಗಿರಲು ಸಾಧ್ಯ ಎಂದು ಉಪನ್ಯಾಸಕ ಎಸ್.ಎಸ್. ರಮೇಶ್ ಅಭಿಪ್ರಾಯಪಟ್ಟರು.
ಸ್ಥಳೀಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದಿಂದ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ನಿಮಿತ್ತ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ಯುವಕರ ಆಲೋಚನೆಗಳ ಮೇಲೆ ನಿರಂತವಾಗಿ ಪ್ರಭಾವ ಬೀರುತ್ತಿದೆ. ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ವರ್ತಮಾನ ಬದುಕನ್ನೆ ಸಮಾಧಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಯುವ ಸಮೂಹಕ್ಕೆ ಸಾಕಷ್ಟು ಅವಕಾಶಗಳು ಇವೆ. ಜತೆಗೆ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ತಿಳಿಸಿದರು.
ಬೆಂಗಳೂರಿನ ಅಲಸೂರು ರಾಮಕೃಷ್ಣ ಮಠದ ಸ್ವಾಮಿ ಮುಕ್ತಿ ಪದಾನಂದಜಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೇವೆಯಿಂದ ಜೀವನದ ಸಾರ್ಥಕತೆ ಬಗ್ಗೆ ಎನ್. ಬಸವರಾಜ್, ಭವ್ಯ ಸನಾತನ ಭಾರತ ಕುರಿತು ಡಾ.ಎನ್.ಎಸ್. ವೇಣುಗೋಪಾಲ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಕೇಂದ್ರದ ವಿಜಯ್ಕುಮಾರ್, ಮಹಾರುದ್ರಯ್ಯ, ಚಿದಾನಂದಪ್ಪ, ಜಗನ್ನಾಥ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕ ಕಾಳಪ್ಪ ಪತ್ತಾರ್ ನಿರ್ವಹಿಸಿದರು.