ಹಂಪಿಯಲ್ಲಿ ಸಾವಿರಾರು ಭಕ್ತರಿಂದ ಸಂಕ್ರಾಂತಿ ಪುಣ್ಯಸ್ನಾನ: ಒಬ್ಬ ಸಾವು
ಹೊಸಪೇಟೆ: ಮಕರ ಸಂಕ್ರಾಂತಿ ನಿಮಿತ್ತ ವಿಶ್ವ ವಿಖ್ಯಾತ ಹಂಪಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೆ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು. ಪ್ರತಿವರ್ಷದಂತೆ ಈ ಭಾಗದ ಪ್ರಸಿದ್ಧ ಮತ್ತು ಐತಿಹಾಸಿಕ ಪುಣ್ಯಸ್ಥಳವಾದ ಹಂಪಿಗೆ ನಾಡಿನ ವಿವಿಧ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಭಕ್ತರುಆಗಮಿಸಿ ಹಬ್ಬದ ಪುಣ್ಯಸ್ನಾನ ಮಾಡಿದರು. ಆ ಮೂಲಕ ಸಂಕ್ರಾಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆಯಿಂದಲೆ ನದಿಯಲ್ಲಿ ಸಾವಿರಾರು ಭಕ್ತರು ಸ್ನಾನ ಮಾಡಿ ಶ್ರೀ ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದರು. ನಂತರ ಹಂಪಿಯಲ್ಲಿ ವಿವಿಧ ದೇವಾಲಯ, ಸ್ಮಾರಕಗಳನ್ನು ವೀಕ್ಷಿಸಿ ಹಂಪಿಯ ಪಾರ್ಕ್, ದೇವಾಲಯ ಬಳಿ ಕುಟುಂಬ ಸಮೇತರಾಗಿ ಕುಳಿತು ತಾವು ತಂದಿದ್ದ ಸಿಹಿ ಊಟವನ್ನು ಮಾಡಿದರು.
ಸುಳಿಗೆ ಸಿಲುಕಿ ಯುವಕ ಸಾವು: ಸಂಕ್ರಾಂತಿಯ ಪುಣ್ಯಸ್ನಾನಕ್ಕೆಂದು ತುಂಗಭದ್ರಾ ನದಿಗೆ ಬಂದಿದ್ದ ಯುವಕನೊಬ್ಬ ನದಿಯಲ್ಲಿನ ನೀರಿನ ಸುಳಿಗೆ ಸಿಕ್ಕು ಮೃತಪಟ್ಟ ಘಟನೆ ಹಂಪಿಯಲ್ಲಿ ಮಂಗಳವಾರ ಜರುಗಿದೆ. ಮೃತ ಯುವಕನನ್ನು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಖೇರವಾಡಿಗಿ ಗ್ರಾಮದ ನಿವಾಸಿ ಬಸವಣ್ಣಯ್ಯ (25) ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ನೀರಿನಲ್ಲಿ ಇಳಿದಾಗ ಈಜು ಬಾರದ ಬಸವಣ್ಣಯ್ಯ ನೀರಿನ ಸುಳಿಗೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದು, ಮೃತ ದೇಹ ಇನ್ನೂ ಪತ್ತೆಯಾಗಿಲ್ಲ.