ಸಂಕ್ರಾಂತಿ: ನವಗ್ರಹ ಅಧಿಪತಿ ಆರಾಧನೆ
ಹೂವಿನಹಡಗಲಿ: ರೈತ ಸಮುದಾಯಕ್ಕೆ ಜನವರಿ, ಫೆಬ್ರವರಿ ತಿಂಗಳು ಸುಗ್ಗಿಯ ಕಾಲ. ಜನ ಜಾನುವಾರಿಗೆ ಬಿಡುವಿನ ಸಮಯ, ಇಂತಹ ವೇಳೆಯಲ್ಲಿ ಹಬ್ಬ, ಹರಿದಿನ, ಜಾತ್ರೆ ಜಪ್ಪತ್ತುಗಳನ್ನು ಮಾಡಿ ತಮ್ಮ ಬದುಕಿನ ಒಂದು ಅಂಗವಾಗಿರುವ ಜಾನುವಾರು ಸಿಂಗರಿಸಿ ಅವುಗಳ ಜಾತ್ರೆ ಮಾಡುವುದು ಒಂದು ವಿಶೇಷ.
ಜಿಲ್ಲೆಯ ಜೀವ ನದಿ ತುಂಗಭದ್ರೆ ನದಿ ತೀರದ ಗ್ರಾಮಗಳಲ್ಲಿ ವಿಜಯನಗರ ಅರಸರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು ಸೇರಿದಂತೆ ಅನೇಕ ರಾಜಮನೆತನಗಳು ಅಳ್ವಿಕೆ ಮಾಡಿದ್ದು, ಬಹುತೇಕ ಶಿವ ಲಿಂಗಗಳನ್ನು ಸ್ಥಾಪನೆ ಮಾಡಿದ್ದಾರೆ.
ನದಿ ತೀರದ ಪುಣ್ಯ ಕ್ಷೇತ್ರಗಳಾದ ಕುರುವತ್ತಿಯ ಮಲ್ಲಿಕಾರ್ಜುನ, ಮೈಲಾರದ ಮೈಲಾರಲಿಂಗೇಶ್ವರ, ಬ್ಯಾಲಹುಣ್ಸಿ ಮಹಾಲಿಂಗು, ಅಂಗೂರು ಕೋಟಿ ಲಿಂಗೇಶ್ವರ, ಕೋಟಿಹಾಳ ಲಿಂಗು, ಮಾಗಳ ಸೂರ್ಯನಾರಾಯಣ, ರಂಗಾಪುರ ಮಹಾಲಿಂಗೇಶ್ವರ, ಜಡಿ ಶಂಕರ, ಕೊಟ್ನಿಕಲ್ಲಿನ ಶಂಕರಲಿಂಗೇಶ್ವರ ದೇವಸ್ಥಾನಗಳು ನದಿ ತೀರದಲ್ಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತುಂಗಭದ್ರೆಯಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಪಂಚನದಿಗಳ ಬೀಡು ಎಂದು ಹೆಸರು ಪಡೆದಿರುವ ತುಂಗ, ಭದ್ರೆ, ವರದ, ಕುಮದ್ವತಿ, ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾಗಿರುವ ತಾಲೂಕಿನ ನಂದಿಗಾವಿ, ಹಾವೇರಿ ತಾಲೂಕಿನ ಗಳಗನಾಥ ಬಳಿ ಇರುವ ಹಾವೇರಿ ಜಿಲ್ಲೆಯ ಗಳಗನಾಥದ ಗಳಗೇಶ್ವರ, ಮೇವುಂಡಿಯ ಪಂಚಲಿಂಗೇಶ್ವರ ದರ್ಶನ ಪಡೆದರು.
ತಾಲೂಕಿನ ಕೊಟ್ನಿಕಲ್ ಶಂಕರಲಿಂಗೇಶ್ವರ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ತಂದು ರಥಕ್ಕೆ ಪೂಜೆ ಸಲ್ಲಿಸಿ ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಐತಿಹಾಸಿಕ ಕೊಟ್ನಿಕಲ್ ಶಂಕರಲಿಂಗೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ ಆಯೋಜಿಸಿತ್ತು. ರಾಜ್ಯದ ವಿವಿಧ ಕಡೆಗಳಿಂದ 4 ಸಾವಿರಕ್ಕೂ ಹೆಚ್ಚು ವಿವಿಧ ತಳಿಯ ಜಾನುವಾರು ಜಾತ್ರೆಯಲ್ಲಿ ಭಾಗವಹಿಸಿದ್ದವು. 15 ದಿನಗಳ ವರೆಗೆ ಜಾನುವಾರು ವಹಿವಾಟು ನಡೆಯಲಿದ್ದು, ದೇವಸ್ಥಾನ ಸಮಿತಿ ವತಿಯಿಂದ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಕ್ರಮಣ: ಪುಣ್ಯಸ್ನಾನ, ಪೂಜೆ
ಕಂಪ್ಲಿ: ಮಕರ ಸಂಕ್ರಮಣ ಅಂಗವಾಗಿ ಕೆಲವರು ಮಂಗಳವಾರ ಇನ್ನು ಕೆಲವರು ಬುಧವಾರ ಇಲ್ಲಿನ ಕೋಟೆ ಪ್ರದೇಶದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸೂರ್ಯ ದೇವನಿಗೆ ಪೂಜೆ ಸಲ್ಲಿಸಿ, ನಮಸ್ಕರಿಸಿದರು. ಕಂಪ್ಲಿ ಭಾಗದಲ್ಲಿ ಎರಡು ದಿನಗಳ ಕಾಲ ಸಂಕ್ರಮಣದ ಸಂಭ್ರಮ ಕಂಡು ಬಂದಿದ್ದು, ಸಂಕ್ರಮಣದ ವಿಶೇಷವಾಗಿ ಕೆಲವರು ಮಂಗಳವಾರ, ಇನ್ನು ಕೆಲವರು ಬುಧವಾರ ತಮ್ಮ ಮನೆಗಳ ಮುಂದೆ ವಿವಿಧ ಬಣ್ಣಗಳ ರಂಗೋಲಿ ಹಾಕಿ ಸಂಭ್ರಮಿಸಿದರು. ಮಕರ ಸಂಕ್ರಾಂತಿ ಅಂಗವಾಗಿ ಅನೇಕರು ಸಂಪ್ರದಾಯದಂತೆ ಎಳ್ಳು, ಬೆಲ್ಲ, ಕುಂಬಳಕಾಯಿ ದಾನ ಮಾಡಿದರು. ಇನ್ನು ಕೆಲವರು, ನವಧಾನ್ಯ, ತರಕಾರಿ, ದಕ್ಷಿಣೆ ದಾನ ನೀಡಿ, ಇಷ್ಟಾ ದೇವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮಹಿಳೆಯರು ಮಕ್ಕಳು ಎಳ್ಳು, ಬೆಲ್ಲವನ್ನು ಬಂಧು ಬಾಂಧವರಿಗೆ, ಸ್ನೇಹಿತರಿಗೆ, ಶಿಕ್ಷಕ-ಶಿಕ್ಷಕಿಯರ ಮನೆಗಳಿಗೆ ತೆರಳಿ ಸಂಭ್ರಮದಿಂದ ಬೀರಿದರು.