ಮಹಿಳೆಯರು ಸ್ವಾವಲಂಬಿಗಳಾಗಿ: ರೂಪೇಶ್
ಹೊಸಪೇಟೆ: ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವ ಮೂಲಕ ಆರ್ಥಿಕಾಭಿವೃದ್ದಿ ಹೊಂದಲು ಮುಂದಾಗಬೇಕು ಎಂದು ನಗರಸಭಾ ಸದಸ್ಯ ರೂಪೇಶ್ ಕುಮಾರ್ ಹೇಳಿದರು.
ನಗರದ ರಾಣಿಪೇಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನನಿ ಎಂಬ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಇತ್ತೀಚಿಗೆ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಪ್ರತಿಯೊಬ್ಬರೂ ಸಂಘಟನೆಗೊಂಡು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಸೇರಿದಂತೆ ಇತರೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯಂತಹ ಕಾರ್ಯ ಪತ್ತೆ ಹಚ್ಚಿ, ನೊಂದ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಮೂಲಕ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಸಂಘಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ಮಹಿಳೆಯರು ಸಂಘಗಳ ಮೂಲಕ ಉಳಿತಾಯ ಮನೋಭಾವನೆ ಬೆಳೆಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಇಂತಹ ಸಂಘ-ಸಂಸ್ಥೆಗಳ ಅಗತ್ಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕ ಅಲಿಸಾಬ್, ಸೇವಾ ಪ್ರತಿನಿಧಿ ಎಂ.ಎಸ್. ಸುವರ್ಣ ರತ್ನ, ಹೇಮಲತಾ, ಸಂಗೀತ ಸೇರಿದಂತೆ ಸ್ಥಳೀಯ ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.