ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಅಡ್ವೊಕೇಟ್ ಅಕಾಡೆಮಿ ಅಸ್ತಿತ್ವಕ್ಕೆ

Rashmi Kasaragodu
Updated On : 18 Jan 2014, 1:23 am

ಬಳ್ಳಾರಿ: ಡಿವಿಸಿ ಮತ್ತು ಡಿಆರ್ಎಂ ಅಡ್ವೊಕೇಟ್ ಅಕಾಡೆಮಿಯನ್ನು ಜ. 19ರಂದು ಅಸ್ತಿತ್ವಕ್ಕೆ ತರುವ ಮೂಲಕ ಕಿರಿಯ ನ್ಯಾಯವಾದಿಗಳಿಗೆ, ಕಾನೂನು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ, ಜ್ಞಾನ ಒದಗಿಸಲು ವಿಚಾರ ಸಂಕಿರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿಯ ಕೆ. ಕೋಟೇಶ್ವರ ರಾವ್, ಮಹೇಂದ್ರನಾಥ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ನ್ಯಾಯವಾದಿಗಳಾದ ಡಿ. ವೇಣುಗೋಪಾಲಾಚಾರ್ಯ ಮತ್ತು ಡಿ.ಆರ್. ಮನ್ನಾರ್ ಅವರ ಹೆಸರಿನಲ್ಲಿ ಅಕಾಡೆಮಿ ಅಸ್ತಿತ್ವಕ್ಕೆ ತರಲಾಗುತ್ತಿದ್ದು, ಜ. 19ರಂದು ನಗರದ ಎಎಸ್ಎಂ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಅಕಾಡೆಮಿಯಲ್ಲಿ ತರಬೇತಿ ಕಾರ್ಯಗಳು ನಿರಂತರವಾಗಿ ನಡೆಯಲಿದ್ದು, ಹಿರಿಯ ಕಾನೂನು ತಜ್ಞ ಉಪನ್ಯಾಸ ನೀಡುವರು ಎಂದರು.
ಸೂಕ್ತ ತರಬೇತಿ: 1980ರಿಂದ ಈಚೆಗೆ ಕಿರಿಯ ನ್ಯಾಯವಾದಿಗಳಿಗೆ ತರಬೇತಿಯೆ ಇಲ್ಲವಾಗಿದೆ. ಹಿರಿಯ ನ್ಯಾಯವಾದಿಗಳ ಬಳಿ ತರಬೇತಿ ಪಡೆಯುತ್ತಾರೋ ಇಲ್ಲವೋ ತಿಳಿಯದಾಗಿದ್ದು, ನಿಗದಿತ ಅವಧಿಯಲ್ಲಿ ತರಬೇತಿ ಪಡೆಯದೆ ನ್ಯಾಯಾಧೀಶರಾಗಿ ನೇಮಕವಾಗುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ನ್ಯಾಯಾಂಗಕ್ಕೆ ಮಾರಕವಾಗಲಿದೆ. ಹೀಗಾಗಿ ವಕೀಲರ ಸಂಘದಲ್ಲಿ ಸುಮಾರು 1500 ಕಿರಿಯ ನ್ಯಾಯವಾದಿಗಳಿದ್ದು, ಈ ಪೈಕಿ ಸುಮಾರು 600-700 ಜನರಿಗೆ ತರಬೇತಿ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಆರಂಭಿಸಲಾಗುತ್ತಿದೆ. ಆ ಮೂಲಕ ಸೂಕ್ತ ತರಬೇತಿ ಮತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಾಧೀಶ ಓ. ಚಿನ್ನಪ್ಪರೆಡ್ಡಿ ಕುರಿತು ತರಿಮೆಲ ನಾಗಿರೆಡ್ಡಿ ಮೆಮೋರಿಯಲ್ ಟ್ರಸ್ಟ್ ಹೊರತಂದಿರುವ ಎ ಲೆಜೆಂಡ್ ಪುಸ್ತಕ ಬಿಡುಗಡೆಯಾಗಲಿದೆ. ಅವರು ನೀಡಿದ ತೀರ್ಪುಗಳೆ ಇಂದಿನ ನ್ಯಾಯವಾದಿಗಳಿಗೆ ದಾರಿ ದೀಪವಾಗಲಿದೆ ಎಂದರು.
ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ರಾಜ್ಯ ಎಐಎಲ್ಯು ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ, ಟಿ.ಎನ್. ಮೆಮೋರಿಯಲ್ ಟ್ರಸ್ಟ್ ಚೇರ್ಮನ್ ಡಾ. ಸೂರ್ಯಸಾಗರ್, ವಿಎಸ್ಕೆ ವಿವಿ ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ಹೊನ್ನೂರ್ ಅಲಿ, ಹಿರಿಯ ನ್ಯಾಯವಾದಿ ಅರವಿಂದ ಮಲೆಬೆನ್ನೂರು, ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ದಾರೆಡ್ಡಿ, ಐಸಿಎಐ ಚೇರ್ಮನ್ ಕೆ. ರಾಜಶೇಖರ್ ಪಾಲ್ಗೊಳ್ಳಲಿದ್ದಾರೆ ಎಂದರು.
ಚಾಗನೂರು ಸಿರಿವಾರ ರೈತ ಹೋರಾಟ ಸಮಿತಿ ಸಂಚಾಲಕ ಮಲ್ಲಿಕಾರ್ಜುನರೆಡ್ಡಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement