ಕಾರ್ಣಿಕ ನುಡಿಯಲು ಮಂಜಪ್ಪಗೆ ದೀಕ್ಷೆ
ಹೂವಿನಹಡಗಲಿ: ಐತಿಹಾಸಿಕ ಹಿನ್ನೆಲೆಯ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯಲು ನೂತನ ಗೊರವಯ್ಯನಿಗೆ ವಂಶ ಪಾರಂಪರ್ಯ ದೀಕ್ಷೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಮೈಲಾರಲಿಂಗೇಶ್ವ ಜಾತ್ರೆ ಸಂದರ್ಭ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಾರ್ಣಿಕದ ಅನಾರೋಗ್ಯದಿಂದ ಆತನ ಹಿರಿಯ ಮಗ ಮಂಜಪ್ಪನಿಗೆ ದೇವಸ್ಥಾನದ ಧರ್ಮದರ್ಶಿ ವೆಂಕಯ್ಯ ಒಡೆಯರ್ ದೀಕ್ಷೆ ನೀಡಲು ದೇವಸ್ಥಾನದ ಆವರಣದ ಶ್ರೀ ಕಪಿಲಮುನಿ ಪೀಠದ ಮುಂಭಾಗದಲ್ಲಿ ಭಾನುವಾರ ಬೆಳಗ್ಗೆಯಿಂದ ಹೋಮ, ಹವನ, ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಕ್ಷೆ ಕಾರ್ಯಕ್ರಮ ನಡೆಯಿತು.
ಸಾಮಗ್ರಿ ಹಸ್ತಾಂತರ: ಕಪಿಲಮುನಿಗಳ ಸ್ಪರ್ಶ ಮಾಡಿರುವ ಕಾರ್ಣಿಕಕ್ಕೆ ಏರುವ ಬಿಲ್ಲು, ಕೋರಿ ಕಂತಿನ ಅಂಗಿ, ಮುಂಡಾಸ, ಕುಂಚಿಗಿ ಮತ್ತು ಭಂಡಾರ ಭಕ್ಷ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ವೆಂಕಯ್ಯ ಒಡೆಯರ್ ನೀಡಿದರು.
ಧರ್ಮದರ್ಶಿಯಿಂದ ಬೋಧನೆ: ಇನ್ನು ಮುಂದೆ ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರು ಕಾರ್ಣಿಕದ ಮಂಜಪ್ಪನನ್ನು ಗೊರವಯ್ಯನೆಂದು ಕರೆಯಲಾಗುತ್ತಿದ್ದು, ವಂಶ ಪಾರಂಪರ್ಯವಾಗಿ ನಡೆದು ಬಂದಿರುವ ಕಾರ್ಣಿಕ ನುಡಿಯುವ ಕಾಯಕ ಮಾಡಬೇಕು. ನಿಮ್ಮ ತಂದೆ ಮಾಲತೇಶಪ್ಪನಂತೆ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಈ ಜವಾಬ್ದಾರಿ ನೀಡಲಾಗುತ್ತಿದೆ ಎಂದು ವೆಂಕಪ್ಪಯ್ಯ ಒಡೆಯರ್ ಬೋಧಿಸಿದರು.
ಕಪಿಲಮುನಿ ಪೀಠ, ದೇವಸ್ಥಾನದ ಅರ್ಚಕರು, ಬಾಬುದಾರರು, ಕಂಚವೀರರು, ಗೊರವಯ್ಯಗಳು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮಕ್ಷಮದಲ್ಲಿ ನಿನಗೆ ದೀಕ್ಷೆ ನೀಡಲಾಗುತ್ತಿದೆ ಎಂದರು. ಮಂಜಪ್ಪ ಕೋರಿ ಕಂತಿನ ಅಂಗಿ ಲಾಂಛನ ತೊಟ್ಟ ನಂತರ ಜೀವನದಲ್ಲಿ ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸುವಂತಿಲ್ಲ. ದುಶ್ಚಟಗಳಿಂದ ದೂರವಿದ್ದು, ಎಲ್ಲ ಭಕ್ತರನ್ನು ಸಮಾನ ರೀತಿ ಕಂಡು ಕ್ಷೇತ್ರದ ಮಹಿಮೆಯಂತೆ ಗುರು-ಹಿರಿಯರು ಮೆಚ್ಚುವ ರೀತಿ ದೇವಸ್ಥಾನದ ಸಂಪ್ರದಾಯಗಳಿಗೆ ಬದ್ಧವಾಗಿದ್ದು, ಶವ ಸಂಸ್ಕಾರ ದಿನದಂದು ಉಪವಾಸ ವ್ರತ, ಸುಳ್ಳು, ಮೋಸ, ವಂಚನೆ ಮಾಡುವಂತಿಲ್ಲ ಎಂದರು. ದೇವಸ್ಥಾನದ ಅರ್ಚಕ ಪ್ರಮೋದ ಭಟ್ಟರು, ಪ್ರಕಾಶ ಒಡೆಯರ್, ಅರವಿಂದ ಸುತಗುಂಡಿ ಇದ್ದರು.