ಶಿಫಾರಸು ಅನುಷ್ಠಾನಕ್ಕೆ ಹೋರಾಟ ಅನಿವಾರ್ಯ
ರಾಯಚೂರು: ಹೈದರಾಬಾದ್ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ 371ನೇ ಕಲಂ(ಜೆ)ನ ಸಮರ್ಪಕ ಜಾರಿಗೆ ಮತ್ತು ಅದರಲ್ಲಿನ ಶಿಫಾರಸುಗಳ ನಿರ್ದಿಷ್ಟ ಕಾಲಮಿತಿಯಲ್ಲಿನ ಅನುಷ್ಠಾನಕ್ಕೆ ಮತ್ತೊಂದು ಹೋರಾಟ ಅನಿವಾರ್ಯ ಎಂದು ಹೈಕ ಹೋರಾಟ ಸಮಿತಿಯ ಮುಖಂಡ ಡಾ. ರಜಾಕ್ ಉಸ್ತಾದ್ ಕರೆ ನೀಡಿದರು.
ನಗರದ ಟಾಗೋರ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹೈ.ಕ. ಭಾಗದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರು ಹಾಗೂ ಉಪನ್ಯಾಸಕರ ಮಹತ್ವದ ಸಭೆಯಲ್ಲಿ ಮಾತನಾಡಿದರು.
ನೌಕರಿಯ ನಿರೀಕ್ಷೆಯಿಲ್ಲ: ರಾಜ್ಯ ಸರ್ಕಾರ ಹೊರಗುತ್ತಿಗೆ ಮತ್ತಿತರೆ ಪದ್ಧತಿ ಅನುಸರಿಸುತ್ತಿರುವುದರಿಂದ ವಿವಿಧ ಹುದ್ದೆಗಳಿಗೆ ಕಾಯಂ ನೇಮಕಾತಿ ಪದ್ಧತಿಯಡಿ ನೌಕರಿ ದೊರೆಯುವ ನಿರೀಕ್ಷೆಯಿಲ್ಲ. ಆಗೀಗ ನಡೆಯುವ ನೇಮಕಾತಿಯಲ್ಲಿಯೂ ಹೈ.ಕ. ಭಾಗದವರಿಗೆ ಅನ್ಯಾಯ ನಡೆಯುವುದನ್ನು ತಪ್ಪಿಸುವ ಅನಿವಾರ್ಯತೆಯಿದೆ.
ರಾಜ್ಯ ಸರ್ಕಾರ ರಚಿಸಿದ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿಯು ನೀಡಿದ 24 ಶಿಫಾರಸುಗಳ ಪೈಕಿ ಹೈ.ಕ. ಭಾಗದಲ್ಲಿರುವ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಅನುದಾನ ಒದಗಿಸಬೇಕೆಂದು ಹೇಳಲಾಗಿದೆ. ಅದಕ್ಕಾಗಿ ಆರು ತಿಂಗಳ ಕಾಲಮಿತಿಯನ್ನೂ ನಿಗದಿ ಮಾಡಿದೆ. ಆದರೆ ಸರ್ಕಾರ ಶಿಫಾರಸು ಅಂಗೀಕಾರವಾಗಿ ಆರು ತಿಂಗಳು ಗತಿಸಿದರೂ ಅನುಷ್ಠಾನ ಮಾತ್ರ ಕೈಗೊಂಡಿಲ್ಲ ಎಂದು ದೂರಿದರು.
ಶಾಸಕರ ಮೇಲೆ ಒತ್ತಡ: ಬಳ್ಳಾರಿ ಜಿಲ್ಲೆಯ ಮಹೇಶ್ವರಸ್ವಾಮಿ ಮಾತನಾಡಿ, ಹೋರಾಟ ಸದ್ಯಕ್ಕೆ ಅನಿವಾರ್ಯ. ಆದರೆ ಅದಕ್ಕೂ ಮುನ್ನ ಈ ಭಾಗದ ಜಿಲ್ಲೆಗಳ ಶಾಸಕರ ಮೇಲೆ ಒತ್ತಡ ಹೇರಬೇಕು. ನಂತರ ಸಿಎಂ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರಿಗೂ ಮನವಿ ಸಲ್ಲಿಸಬೇಕು ಎಂದರು.
ಹೋರಾಟದ ಅವಶ್ಯಕತೆ: ಡಾ. ಜಗದೀಶ್ ಮಾತನಾಡಿ, ಸಂಘಟನೆಯನ್ನು ಬಲಪಡಿಸುವ ಮೂಲಕ ಹೋರಾಟ ಮಾಡುವ ಅವಶ್ಯಕತೆಯಿದೆ. ಆಡಳಿತ ಮಂಡಳಿ, ಬೋಧಕ ವರ್ಗದವರು ಒಗ್ಗೂಡಿ ಹೋರಾಡಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು. ರಾಘವೇಂದ್ರ ಕುಷ್ಟಗಿ, ಎಸ್.ಎಸ್. ಪಾಟೀಲ್, ಬಸವರಾಜ ಸಿರವಾರ್ ಸೇರಿದಂತೆ ಅನೇಕರಿದ್ದರು.