ಫಲಾನುಭವಿಗೆ ಯೋಜನೆ ತಲುಪಿಸಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 20
ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯ ವಿದ್ಯಾರಣ್ಯ ಸಭಾಂಗಣದಲ್ಲಿ ಸೋಮವಾರ ನಡೆದ ವಿಜಯನಗರ ವಿಧಾನಸಭಾ ಕ್ಷೇತ್ರ, ಕೂಡ್ಲಿಗಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವ ವಸತಿ ಯೋಜನೆಯ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂ ಗ್ರಾಮ ಸಭೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಗಬೇಕು. ಕೆಲ ಫಲಾನುಭವಿಗಳಿಂದ ಹಣ ಪಡೆದು ಮನೆಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳಿವೆ. ನೋಡಲ್ ಅಧಿಕಾರಿಗಳು, ಪಿಡಿಒಗಳು ಮತ್ತು ಕಾರ್ಯದರ್ಶಿಗಳು ನಿಜವಾದ ಬಡವರನ್ನು ಪತ್ತೆಹಚ್ಚಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ತಮ್ಮ ಜವಾಬ್ದಾರಿಯನ್ನು ಅರಿತು ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಯಾವುದೆ ಗ್ರಾಪಂನಲ್ಲಿ ಅವ್ಯಹಾರಗಳು ಕಂಡುಬಂದಲ್ಲಿ ಆಯಾ ಗ್ರಾಪಂಗೆ ಸಂಬಂಧಿಸಿ ಪಿಡಿಒ, ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಅನೇಕ ಗ್ರಾಪಂಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿಧ್ಯಾವಂತರು ಇರುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡದೆ ತಪ್ಪು ದಾರಿ ತೋರಿಸಿ ಅವ್ಯವಹಾರ ನಡೆದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳೆ ಹೊಣೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಶೌಚಾಲಯ ಹಾಗೂ ಸ್ನಾನದ ಕೋಣೆ ನಿರ್ಮಾಣಕ್ಕೆ ಸರ್ಕಾರ ರು. 20 ಸಾವಿರ ನೀಡುತ್ತಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗುವಂತೆ ಅರಿವು ಮೂಡಿಸಬೇಕು ಎಂದರು.
ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ತಾಪಂ ಇಒ ರಮೇಶ್ ತಳವಾರ್, ಕೂಡ್ಲಿಗಿ ತಾಪಂ ಇಒ ಡಿ.ಆರ್. ಶಿವಪ್ಪ, ಜಿಪಂ ಸದಸ್ಯರಾದ ಅನ್ನದಾನ ರೆಡ್ಡಿ, ಅನಿತಾ ಆನಂದ್, ತಿಪ್ಪೀಬಾಯಿ ಠಾಕ್ರಾನಾಯ್ಕ, ಶಶಿಧರಸ್ವಾಮಿ, ಶಾರದ ಪ್ರಸಾದ್, ಸುನಂದಾಬಾಯಿ, ಮೀನಾಕ್ಷಮ್ಮ, ಹೊಸಪೇಟೆ, ಕೂಡ್ಲಿಗಿ ತಾಪಂ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.