ಸುದ್ದಿ ಸಂಕ್ಷೇಪ
ಇಂದು ಹಗರಿಯಲ್ಲಿ ಕೃಷಿ ಮೇಳ
ಬಳ್ಳಾರಿ: ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ವಸ್ತುಪ್ರದರ್ಶನ, ಪ್ರಾತ್ಯಕ್ಷಿತೆ, ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ಒಳಗೊಂಡ ಕೃಷಿ ಮೇಳವನ್ನು ಜ. 21ರಿಂದ ಬಳ್ಳಾರಿ ತಾಲೂಕಿನ ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ ಎಂದು ಹಗರಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಿ. ರವಿಶಂಕರ್, ಬೇಸಾಯ ತಜ್ಞ ಕಾಲಿಬಾವಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿ, ಜೈವಿಕ ಇಂಧನ, ಬೀಜ ಸಂಸ್ಕರಣ ಘಟಕಗಳು ಸೇರಿದಂತೆ ಇತರ ವಿಷಯಗಳ ಕುರಿತು ವಸ್ತುಪ್ರದರ್ಶನ ಹಾಗೂ ಪ್ರಾತ್ಯಕ್ಷಿತೆ ನಡೆಯಲಿದೆ. ಸಂಶೋಧನಾ ಕೇಂದ್ರದಿಂದ ರೈತರಿಗೆ ಆಗಿರುವ ಅನುಕೂಲಗಳು, ಬಿತ್ತನೆ ಬೀಜ, ಫಲ, ಪುಷ್ಪಗಳ ವಿವಿಧ ತಳಿಗಳು ಹಲವು ಮಾಹಿತಿ ಮತ್ತು ಹೆಚ್ಚಿನ ಜ್ಞಾನ ನೀಡುವ ಉದ್ದೇಶವನ್ನು ಕೃಷಿ ಮೇಳ ಹೊಂದಿದೆ ಎಂದರು.
ರಾಯಚೂರು ಕೃಷಿ ವಿವಿ, ಹಗರಿ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಳ್ಳಾರಿ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಈ ಮೇಳ ಹಮ್ಮಿಕೊಂಡಿವೆ. ಇದರ ಲಾಭವನ್ನು ಪ್ರತಿಯೊಬ್ಬ ರೈತರು ಪಡೆಯುವಂತಾಗಬೇಕು. ಮೇಳದಲ್ಲಿ ಜಿಲ್ಲೆಯ 7 ತಾಲೂಕುಗಳಿಂದ 2000 ರೈತರು ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನದಲ್ಲಿ ಕೃಷಿ ಉತ್ಪನ್ನಗಳು ಹಾಗೂ ಬೀಜದ ತಳಿಗಳನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜ. 21ರಂದು ಬೆಳಗ್ಗೆ 10ಕ್ಕೆ ಕೃಷಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಚಾಲನೆ ನೀಡಲಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ. ಶ್ರೀರಾಮುಲು ಅಧ್ಯಕ್ಷತೆವಹಿಸುವರು. ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದೆ ಜೆ. ಶಾಂತಾ, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ. ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್, ವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್. ಜನಗೌಡರ್, ವಿಸ್ತರಣಾ ನಿರ್ದೇಶಕ ಡಾ.ಕೆ.ಪಿ. ವಿಶ್ವನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ವಿವಿಯ ಸಹ ಸಂಶೋಧನಾ ನಿರ್ದೇಶಕ ಡಾ.ಐ. ಶಂಕರಗೌಡ ಅವರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗ್ಠೋಯಲ್ಲಿ ಎಸ್.ಎಂ. ಪ್ರಶಾಂತ್ ಇದ್ದರು.
ಶಾಲಾ ಮಹೋತ್ಸವ: ನಾಳೆ ಸಭೆ
ಮುನಿರಾಬಾದ್: ಸಮೀಪದ ಹುಲಿಗಿ ಗ್ರಾಮದ ತುಂಗಭದ್ರಾ ಪ್ರೌಢ ಶಾಲೆಯು 2014-15ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಆಚರಿಸಲಿದ್ದು, ಈ ಬಗ್ಗೆ ಚರ್ಚಿಸಲು ಜ. 22ರಂದು ಮಧ್ಯಾಹ್ನ 2.30ಕ್ಕೆ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ, ಗ್ರಾಮಸ್ಥರ ಸಭೆ ಕರೆಯಲಾಗಿದೆ. ಸಭೆಗೆ ತಪ್ಪದೆ ಹಾಜರಾಗಿ ಸಲಹೆ ನೀಡಬೇಕೆಂದು ಪಂಪಾಪತಿ ರಾಟಿ, ಸುನೀಲ್ಕುಮಾರ್ ಇಜಾರಿ, ಹನುಮಂತ ಗಿಡ್ಡಾಲಿ ಕೋರಿದ್ದಾರೆ.
ಅನುದಾನ ಹೆಚ್ಚಿಸಲಿ: ಮೌಲಾಲಿ
ಬಳ್ಳಾರಿ: ಅನಿಷ್ಟ ಪದ್ಧತಿಗಳ ವಿರುದ್ಧ ವಚನಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲು ಸರ್ಕಾರ ಕೇವಲ ರು. 5 ಲಕ್ಷ ಅನುದಾನ ನೀಡಿದ್ದು, ಇನ್ನಷ್ಟು ಹೆಚ್ಚಿಸಬೇಕು ಎಂದು ಗಂಗಾಮತ ಸಂಘದ ಜಿಲ್ಲಾಧ್ಯಕ್ಷ ಬಿ. ಮೌಲಾಲಿ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದ ಸಾಮಾಜಿಕ ವ್ಯವಸ್ಥೆಯ ಪೂರ್ಣ ಚಿತ್ರಣವನ್ನು ವಚನಗಳಲ್ಲಿ ಕಟ್ಟಿಕೊಟ್ಟಿದ್ದ ಚೌಡಯ್ಯನವರು, ವಚನಗಳಿಂದಲೆ ಜನತೆಯ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದರು. ಇಂತವರ ಜಯಂತಿ ಆಚರಿಸಲು ಸರ್ಕಾರ ಕಡಿಮೆ ಅನುದಾನ ನೀಡಿದ್ದು, ಇನ್ನಷ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಗುಲ್ಬರ್ಗ ಜಿಲ್ಲೆ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಫೆ. 9ರಂದು ಗಂಗಾಮತ ಸಮುದಾಯದ ಬೃಹತ್ ಸಮಾವೇಶ ಜರುಗಲಿದೆ. ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡ ಹಾಗೂ ಸಚಿವರೂ ಆದ ಬಾಬುರಾವ್ ಚಿಂಚನಸೂರ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಮುದಾಯದ ಭಟ್ಕಳ, ಉಡುಪಿ, ನಂಜನಗೂಡು ಶಾಸಕರು ಪಾಲ್ಗೊಳ್ಳುವರು ಎಂದರು.
ಜಯಂತಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಗಂಗಾಮತ ಸಂಘದ ಸಹಯೋಗದಲ್ಲಿ ಜ. 21ರಂದು ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಗುತ್ತಿದ್ದು, ಬೆಳಗ್ಗೆ ಕನಕದುರ್ಗಮ್ಮ ದೇವಸ್ಥಾನದಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವರೆಗೆ ಮೆರವಣಿಗೆ ನಡೆಯಲಿದೆ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು. ಯು. ರಮೇಶ್, ಎಳ್ಳಾರ್ತಿ ಎಂ. ಸಿದ್ದಪ್ಪ, ಗೋನಾಳ ಪಂಪಾಪತಿ ಸೇರಿದಂತೆ ಹಲವರು ಗೋಷ್ಠಿಯಲ್ಲಿ ಇದ್ದರು.
ಬಿಜೆಪಿಗೆ ಶ್ರೀರಾಮುಲು ಮರು ಸೇರ್ಪಡೆ ಖಚಿತ: ಮೃತ್ಯುಂಜಯ ಜಿನಗಾ
ಬಳ್ಳಾರಿ: ಬಿಎಸ್ಸಾರ್ ಸಂಸ್ಥಾಪಕ, ಶಾಸಕ ಬಿ. ಶ್ರೀರಾಮುಲು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಇನ್ನು ನಾಲ್ಕೈದು ದಿನಗಳಲ್ಲೆ ಉತ್ತರ ಹೊರಬರಲಿದೆ ಎಂದು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ತಿಳಿಸಿದರು.
ಸೋಮವಾರ ತಾಲೂಕಿನ ಮೋಕಾ ಪೈಪ್ಲೈನ್ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಶ್ರೀರಾಮುಲು ಬಿಜೆಪಿ ಸೇರುತ್ತಾರೆ ಎಂಬ ವಿಶ್ವಾಸ ನನ್ನಲ್ಲಿದೆ. ಈ ಹಿಂದೆ ಅನಿವಾರ್ಯ ಕಾರಣಗಳಿಂದ ನಾವೆಲ್ಲರು ಒಟ್ಟಾಗಿ ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೆವು. ಆದರೆ, ಇಂದು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಬಿಜೆಪಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬಿಜೆಪಿಗೆ ಸೇರಲಾಗುವುದು ಎಂದರು.
ಕಾಂಗ್ರೆಸ್, ಜೆಡಿಎಸ್ ಸೇರ್ಪಡೆಯಾಗುತ್ತಾರೊ? ಯಾವ ಪಕ್ಷ ಸೇರುತ್ತಾರೆ ಎಂಬ ಗೊಂದಲ ಜನರಲ್ಲಿ ಮೂಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿನಗಾ, ಶ್ರೀರಾಮುಲು ಪಕ್ಷ ಸೇರ್ಪಡೆ ಕುರಿತಂತೆ ದಿನಕ್ಕೊಂದು ಸುದ್ದಿಯಾಗುತ್ತಿವೆ. ಆದರೆ, ನನ್ನ ಪ್ರಕಾರ ಶ್ರೀರಾಮುಲು ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತ ಎಂದರು. ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಗೆ ಸೇರಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳು ಪಕ್ಷ ಬದಲಾವಣೆ ಮಾಡುವುದು ಸಹಜ. ಆದರೆ, ರಾಜ್ಯದ ಹಿಂದುಳಿದ ವರ್ಗದ ನಾಯಕ ಶ್ರೀರಾಮುಲು ಸೇರ್ಪಡೆ ಕುರಿತು ಸಾಧಕ, ಬಾಧಕಗಳ ಕುರಿತು ಚಿಂತಿಸಬೇಕಾಗುತ್ತದೆ. ಅದಕ್ಕೆ ಸಮಯಾವಕಾಶ ಬೇಕು. ಬಿಜೆಪಿಯ ಎಲ್ಲ ಹಿರಿಯ ಮುಖಂಡರ ಜತೆ ತಾತ್ವಿಕ ಚರ್ಚೆಯಾಗಿದ್ದು, ಶೀಘ್ರವೆ ಬಿಜೆಪಿಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಪಂ ಸದಸ್ಯ ಗೋನಾಳ ರಾಜಶೇಖರಗೌಡ, ಇಬ್ರಾಹಿಂ ಇದ್ದರು.