ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 21 Jan 2014, 12:32 pm

ಇಂದು ವಿಚಾರ ಸಂಕಿರಣ
ಹೊಸಪೇಟೆ: ಹಂಪಿ ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗವು ಲಿಂಗ, ಲೈಂಗಿಕತೆ ಮತ್ತು ಕಾನೂನು ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿವಿಯ ಪಂಪ ಸಭಾಂಗಣದಲ್ಲಿ ಜ. 21 ಮತ್ತು 22ರಂದು ಹಮ್ಮಿಕೊಂಡಿದೆ. ಜ. 21ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಅಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಸಂಗಮಾ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸುವರು. ಅಸ್ತಿತ್ವ ಲೀಗಲ್ ಟ್ರಸ್ಟ್ ಪ್ರಧಾನ ಸಂಸ್ಥಾಪಕಿ ಅಂಜಲಿ ರಾಮಣ್ಣ ಭಾಗವಹಿಸುವರು. ವಿವಿ ಕುಲಪತಿ ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು.ಸಭೆ ನಂತರ ಅಧಿಕಾರ ಜ್ಞಾನ ಮತ್ತು ಲೈಂಗಿಕಾತ್ಮಕತೆ ವಿಷಯ ಕುರಿತು ಡಾ. ಕಿಕ್ಕೇರಿ ನಾರಾಯಣ ಉಪನ್ಯಾಸ ನೀಡುವರು. ಲೈಂಗಿಕ ದೌರ್ಜನ್ಯ ಮತ್ತು ಕಾನೂನು, ಲೈಂಗಿಕ ದೌರ್ಜನ್ಯ ಪರೀಕ್ಷಾ ವಿಧಾನಗಳು ಮತ್ತು ಕಾನೂನು, ಸಾಂಪ್ರದಾಯಿಕ ಆಚರಣೆ ಮತ್ತು ಲೈಂಗಿಕತೆ, ಭಾರತೀಯ ಸಿನಿಮಾದಲ್ಲಿ ಲಿಂಗ ಮತ್ತು ಸೆನ್ಸಾರ್ಶಿಪ್ ನಡುವಿನ ಸಂಬಂಧ ಕುರಿತ ಅಧ್ಯಯನಗಳ ಸಮೀಕ್ಷೆ, ದೈಹಿಕ ಸಮಗ್ರತೆ ಮತ್ತು ಜಸ್ಟೀಸ್ ಜೆ.ಎಸ್. ವರ್ಮ ಸಮಿತಿ ವರದಿ ವಿಷಯಗಳ ಕುರಿತು ಬೆಂಗಳೂರಿನ ಶಾಂತಾ ಮಾತನಾಡುವರು. ಉತ್ತರ ಕನ್ನಡ ಜಿಲ್ಲೆ ವೈದ್ಯೆ ಡಾ.ಎಚ್.ಎಸ್. ಅನುಪಮಾ, ಹಂಪಿ ವಿವಿಯ ಡಾ. ಶೈಲಜಾ ಹಿರೇಮಠ, ಡಾ. ನಿಖಿಲಾ ಹೈದರಾಬಾದ್, ಅಂಜಲಿ ರಾಮಣ್ಣ ಪ್ರಬಂಧ ಮಂಡಿಸುವರು. ಜ. 22ರಂದು ಹಿರಿಯ ವಕೀಲರಾದ ಹೇಮಲತಾ ಮಹಿಷಿ ಸಮಾರೋಪ ಭಾಷಣ ಮಾಡುವರು. ಹಂಪಿ ವಿವಿ ಪ್ರಾಧ್ಯಾಪಕ ಡಾ. ಅಶೋಕಕುಮಾರ ರಂಜೇರ ಅಧ್ಯಕ್ಷತೆ ವಹಿಸುವರು. ಲಿಂಗ, ಲೈಂಗಿಕತೆ ಮತ್ತು ಕಾನೂನು ಸಮಸ್ಯೆಗಳ ಕುರಿತು ಸುನೀಲ್, ಸುಮತಿ, ಚಾಂದಿನಿ, ಹಿರಿಯ ರಂಗ ಕಲಾವಿದೆ ಡಾ. ನಾಗರತ್ನಮ್ಮ, ಮಿಥುನ್, ಸಂಗಮಾ ಟಿಪ್ಪಣಿ ಮಂಡಿಸುವರು ಎಂದು ಡಾ. ಶೈಲಜಾ ಹಿರೇಮಠ ತಿಳಿಸಿದ್ದಾರೆ.
ಇಂದು ಪುಣ್ಯಾರಾಧನೆ
ಬಳ್ಳಾರಿ: ಉಜ್ಜಿನಿ ಸದ್ಧರ್ಮ ಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ 78ನೇ ಪುಣ್ಯಾರಾಧನೆ ಕಾರ್ಯಕ್ರಮ ಜ. 21ರಂದು ಮಂಗಳವಾರ ಬೆಳಗ್ಗೆ 8ಕ್ಕೆ ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ತೆಕ್ಕಲಕೋಟೆಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹರಗಿನಡೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಕಮ್ಮರಚೇಡು ಕಲ್ಯಾಣಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪುಣ್ಯಾರಾಧನೆ ಅಂಗವಾಗಿ ಜ. 21ರಂದು ಬೆಳಗ್ಗೆ 8 ಗಂಟೆಗೆ ಶ್ರೀ ದಾರುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ ಎಂದು ವೀರಶೈವ ಕಲ್ಯಾಣಾಭಿವೃದ್ಧಿ ಸಂಘ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ-9448392999, 9880443333, 9686064364 ಸಂಪರ್ಕಿಸಬಹುದು.
ನಂದಿಪುರ: ಕೃಷಿ ಮೇಳ
ಹಗರಿಬೊಮ್ಮನಹಳ್ಳಿ: ತಾಲೂಕಿನ ನಂದಿಪುರದಲ್ಲಿ ಗುರು ದೊಡ್ಡಬಸವೇಶ್ವರ ಜಾತ್ರೆ ಪ್ರಯುಕ್ತ ಫೆ. 9, 10 ಹಾಗೂ 11ರಂದು ಕೃಷಿ ಮೇಳ ಆಯೋಜಿಸಲಾಗಿದೆ. ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್, ಮಠಾಧೀಶರ ಧರ್ಮ ಪರಿಷತ್, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳ, ಕೃಷಿ ವಸ್ತುಪ್ರದರ್ಶನ ಹಾಗೂ ಸುಧಾರಿತ ಕೃಷಿ ತಾಂತ್ರಿಕತೆ ಕುರಿತು ಉಪನ್ಯಾಸ, ಸಾವಯವ ಕೃಷಿಯ ಬಳಕೆ, ಪ್ರಯೋಜನ, ಖುಷ್ಕಿ ಬೇಸಾಯದಲ್ಲಿ ಹೆಚ್ಚಿನ ಇಳುವರಿ ಕುರಿತ ಉಪನ್ಯಾಸ ಮತ್ತು ಚರ್ಚೆ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಭಾಗವಹಿಸುವವರು ನೋಂದಾಯಿಸಲು ಫೆ. 1ರೊಳಗೆ ಅಧ್ಯಕ್ಷರು ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್, ಪುಣ್ಯಕ್ಷೇತ್ರ ನಂದಿಪುರ, ಬ್ಯಾಸಿಗಿದೇರಿ (ಅಂಚೆ) ಹಗರಿಬೊಮ್ಮನಹಳ್ಳಿ (ತಾ) ಬಳ್ಳಾರಿ (ಜಿ) ಮೊ-9449067363, 9880520236, 7259330625 ಸಂಪರ್ಕಿಸಲು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಸೆಮಿಸ್ಟರ್ ಪದ್ಧತಿಗೆ ಐಟಿಐ ವಿದ್ಯಾರ್ಥಿಗಳ ವಿರೋಧ
ಕೊಟ್ಟೂರು: ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಹೆಚ್ಚಳ ಮತ್ತು ಐಟಿಐ ತರಬೇತಿಗೆ ಸರ್ಕಾರ ನೂತನವಾಗಿ ಅಳವಡಿಸಲು ಮುಂದಾಗಿರುವ ಸೆಮಿಸ್ಟರ್ ಪದ್ಧತಿ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಸಹಯೋಗದಲ್ಲಿ ಶುಕ್ರವಾರ ಪಟ್ಟಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎಐಎಸ್ಎಫ್ ರಾಜ್ಯ ಸಂಚಾಲಕ ಸಂತೋಷ್ ಮಾತನಾಡಿ, ಈ ಹಿಂದೆ ರು. 3,732 ಶುಲ್ಕ ನಿಗಧಿಗೊಳಿಸಿತ್ತು. ಇದೀಗ ಒಮ್ಮೆಲೆ ರು. 4,485ಗೆ ಹೆಚ್ಚಿಸಲಾಗಿದೆ. ಪ್ರಾಯೋಗಿಕ ಶುಲ್ಕದಲ್ಲೂ ರು. 8  ಹೆಚ್ಚಿಸಲಾಗಿದೆ. ಪರೀಕ್ಷಾ ಶುಲ್ಕವನ್ನು ರು. 140ರಿಂದ ರು. 168ಗೆ ಹೆಚ್ಚಿಸಲಾಗಿದೆ. ಅದೇ ರೀತಿ ದ್ವಿತೀಯ ವರ್ಷದ ಪಿಯುಸಿ ಶುಲ್ಕವನ್ನು ರು. 84ನಿಂದ ರು. 101ಗೆ. 2 ವಿಷಯಕ್ಕೆ ರು. 168ರಿಂದ ರು. 201ಗೆ ಮತ್ತು 3 ಮತ್ತು ಅದಕ್ಕೂ ಮೇಲ್ಪಟ್ಟ ವಿಷಯಗಳ ಕಲಿಕೆಗೆ ರು. 250 ನಿಂದ ರು. 302ಗೆ ದಿಢೀರನೆ ಹೆಚ್ಚಿಸುವ ಮೂಲಕ ಕಲಿಕೆಗೆ ದೊಡ್ಡ ಪ್ರಮಾಣದಲ್ಲಿ ಅಡ್ಡಿ ಉಂಟುಮಾಡುವ ಪ್ರಯತ್ನ ಸಾಗಿಸಿದೆ ಎಂದು ಆರೋಪಿಸಿದರು.
ಕೊಟ್ಟೂರು ಘಟಕದ ಸಂಚಾಲಕ ವಿನಾಯಕ, ವಿಭೂತಿ ಈರಣ್ಣ ಮಾತನಾಡಿದರು.
ದಿವಾಕರ, ನೂತನ್ಪ್ರಸಾದ್, ತ್ರಿವೇಣಿ, ಕೊಟ್ರೇಶ್ ಎಂ.ಎಚ್.ಎಂ., ದಿವಾಕರ ಡಿ.ಎನ್., ಮಹ್ಮದ್ ರಫಿ ಮತ್ತಿತರರು ಭಾಗವಹಸಿದ್ದರು. ನಂತರ ನಾಡಕಚೇರಿಗೆ ತೆರಳಿ ಶಿರಸ್ತೇದಾರರಿಗೆ ಮನವಿಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement