ಅಪಹೃತ ಇಬ್ರಾಹಿಂ ಪತ್ತೆಗೆ ಕ್ರಮ ಕೋರಿ ಗೃಹ ಸಚಿವ ಶಿಂದೆಗೆ ಬಿಎಸ್ವೈ ಪತ್ರ
ಬೆಂಗಳೂರು: ಕಳೆದ ನವೆಂಬರ್ 25ರಂದು ಒಡಿಶಾದಲ್ಲಿ ಅಪಹರಣಕ್ಕೊಳಗಾಗಿರುವ ಬಳ್ಳಾರಿ ಮೂಲದ ಗೆಜೆಟೆಡ್ ಅಧಿಕಾರಿ ಇಬ್ರಾಹಿಂ ಷರೀಫ್ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಪತ್ರದ ಪ್ರತಿಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಳುಹಿಸಿದ್ದು, ಅಪಹರಣಕ್ಕೊಳಗಾಗಿರುವ ಒಬ್ಬ ಯುವ ಮತ್ತು ದಕ್ಷ ಅಧಿಕಾರಿಯನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಪತ್ರದ ಸಾರಾಂಶ: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಧಿಕಾರಿ ಇಬ್ರಾಹಿಂ ಷರೀಫ್ ಅವರನ್ನು ನ. 25ರಂದು ಅಪಹರಿಸಲಾಗಿದ್ದು, ಅವರು ಇದುವರೆಗೂ ಪತ್ತೆಯಾಗಿಲ್ಲ ಎಂದು ತಂದೆ ಗಿಡ್ಡು ಸಾಹೇಬ್ ತಮ್ಮ ಗಮನಕ್ಕೆ ತಂದಿದ್ದಾರೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ನ ಒಡಿಶಾ ಭುವನೇಶ್ವರ ವಿಭಾಗೀಯ ಕಚೇರಿಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿರುವ ಇಬ್ರಾಹಿಂ ಷರೀಫ್ ಅವರನ್ನು ಅಲ್ಲಿನ ಅಕ್ರಮ ಗಣಿಗಾರಿಕೆ ಲಾಬಿಯಲ್ಲಿ ತೊಡಗಿದ್ದವರು ಅಪಹರಿಸಿದ್ದಾರೆ ಎಂಬ ಅನುಮಾನವಿದೆ.
ಅಪಹರಣಕ್ಕೊಳಗಾದ ಅಧಿಕಾರಿ ಇದುವರೆಗೂ ಪತ್ತೆಯಾಗದ ಕಾರಣ ಆತನ ಕುಟುಂಬ ಸದಸ್ಯರು ಆತಂಕ ಮತ್ತು ನೋವಿನಲ್ಲಿದ್ದಾರೆ. ಒಡಿಶಾ ಪೊಲೀಸರು ಮತ್ತು ಸ್ಥಳೀಯ ಪ್ರಾಧಿಕಾರಗಳು ಅವರ ಪತ್ತೆಗೆ ಗಂಭೀರ ಪ್ರಯತ್ನ ನಡೆಸಿದಂತೆ ಕಾಣುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಉತ್ತಮ ಪೊಲೀಸರ ನೆರವಿನೊಂದಿಗೆ ಇಬ್ರಾಹಿಂ ಷರೀಫ್ ಅವರನ್ನು ಪತ್ತೆಹಚ್ಚಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.