ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲೈಂಗಿಕ ಅಲ್ಪಸಂಖ್ಯಾತರು ಅಪರಾಧಿಗಳಲ್ಲ: ಪದ್ಮಶಾಲಿ

Vishwanath S
Updated On : 22 Jan 2014, 2:30 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 21
ಲೈಂಗಿಕ ಅಲ್ಪಸಂಖ್ಯಾತರು ಅಪರಾಧಿಗಳಲ್ಲ ಎಂದು ಸಂಗಮ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಹೇಳಿದರು.
ಹಂಪಿ ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗ ಪಂಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗ, ಲೈಂಗಿಕತೆ ಮತ್ತು ಕಾನೂನು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜುಲೈ 2, 2009ರಲ್ಲಿ ದೆಹಲಿ ಹೈಕೋರ್ಟ್ ವಯಸ್ಕರ ಪರಸ್ಪರ ಒಪ್ಪಿತ ಲೈಂಗಿಕ ಕ್ರಿಯೆಯು ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಸಂವಿಧಾನದ ಚೌಕಟ್ಟಿನಲ್ಲಿ ಕೊಟ್ಟ ತೀರ್ಪಿನಿಂದ ಲೈಂಗಿಕ ಅಲ್ಪಸಂಖ್ಯಾತರು ಅಪರಾಧಿಗಳಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೋರ್ಟ್ 2010ರಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರವರ್ಗ ಎ ನಲ್ಲಿ ಸೇರಿಸಿ ಹಿಂದುಳಿದ ವರ್ಗದವರ ಸ್ಥಾನಮಾನ ನೀಡಬೇಕೆಂದು ಆದೇಶಿಸಿದೆ. ನಿವೇಶನ ಪಡಿತರ ಚೀಟಿ, ಮತದಾರ ಗುರುತಿನ ಚೀಟಿ ಪಡೆಯಲು ಮಾನ್ಯತೆ ಕೊಡಲಾಯಿತು ಎಂದು ವಿವರಿಸಿದರು.
ಆದರೆ 11ನೇ ಡಿಸೆಂಬರ್ 2013ರಂದು ಸುಪ್ರೀಂ ಕೋರ್ಟ್ ಈ ಸಮುದಾಯಕ್ಕೆ ಯಾವುದೆ ರೀತಿಯ ಮೂಲಭೂತ ಹಕ್ಕಿಲ್ಲ. ಮಾನವ ಹಕ್ಕುಗಳಿಲ್ಲ ಎಂದು ತೀರ್ಪು ನೀಡಿತು. ಅಂದಿನಿಂದ ಲೈಂಗಿಕ ಅಲ್ಪಸಂಖ್ಯಾತರು ಅಪರಾಧಿಗಳಾಗಿದ್ದಾರೆ. ನಾವು ಈ ದೇಶದ ಪ್ರಜೆಗಳಾಗಿಲ್ಲ ಎಂಬ ನೋವು ಅವರಲ್ಲಿದೆ. ಸಮುದಾಯದ ಹಿತ ಕಾಪಾಡಬೇಕಾದ ನ್ಯಾಯಾಲಯದ ಈ ತೀರ್ಪಿನಿಂದ ಮಹಿಳಾ ಚಳವಳಿಗೆ ಭಾರಿ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಹಗಾರ್ತಿ ಎ. ರೇವತಿ, ಅಸ್ತಿತ್ವ ಲೀಗಲ್ ಟ್ರಸ್ಟ್‌ನ ಪ್ರಧಾನ ಸಂಸ್ಥಾಪಕಿ ಅಂಜಲಿ ರಾಮಣ್ಣ ಮಾತನಾಡಿದರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಜ ಪರಿವರ್ತನೆಗಳನ್ನು ನಾವು ಸಹಜವಾಗಿ ಸ್ವೀಕರಿಸುವ ನಿಟ್ಟಿನಲ್ಲಿ ಚರ್ಚೆ ಮಾಡಬೇಕು. ಈ ಸಂದರ್ಭದಲ್ಲಿ ಕನ್ನಡ ವಿವಿ ಲಿಂಗ, ಲೈಂಗಿಕತೆ ಕುರಿತು ಇರುವ ಅಪಕಲ್ಪನೆಗಳನ್ನು, ಸಂಕುಚಿತ ಮನೋಭಾವನೆಗಳನ್ನು ವಿಮರ್ಶೆಗೆ ಒಳಪಡಿಸುವ ಮೂಲಕ ವಿಶ್ಲೇಷಣೆಗೊಳ ಪಡಿಸಬೇಕಾಗಿದೆ ಎಂದರು.
ಡಾ. ಶೈಲಜಾ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಂಪಾಪತಿ ನಿರೂಪಿಸಿ, ವಂದಿಸಿದರು. ನಂತರ ಅಧಿಕಾರ, ಜ್ಞಾನ ಮತ್ತು ಲೈಂಗಿಕತೆ ಕುರಿತು ಡಾ. ಕಿಕ್ಕೇರಿ ನಾರಾಯಣ ವಿಶೇಷ ಉಪನ್ಯಾಸ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement