ವಿಜೃಂಭಣೆಯ ಶ್ರೀ ವಾಸವಿದೇವಿ ಮೂರ್ತಿ ಮೆರವಣಿಗೆ
ಕಂಪ್ಲಿ: ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಯುವ ಜಾಗೃತಿ ವರ್ಷ 2013-2014 ಮತ್ತು ಕಂಪ್ಲಿ ವಾಸವಿ ಯುವಜನ ಸಂಘದ ಬೆಳ್ಳಿ ಮಹೋತ್ಸವ ಹಾಗೂ 15ನೇ ರಾಜ್ಯ ಮಟ್ಟದ 2 ದಿನಗಳ ಆರ್ಯವೈಶ್ಯ ಯುವಜನ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ಮೆರವಣಿಗೆಯಲ್ಲಿ ಆನೆ ಮೇಲೆ ಅಂಬಾರಿ ನಿರ್ಮಿಸಿ ಶ್ರೀವಾಸವಿದೇವಿ ಮೂರ್ತಿಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರೇಶ್ವರ ದೇವಸ್ಥಾನದಿಂದ ಸಮ್ಮೇಳನ ನಡೆಯುವ ಸ್ಥಳ ಕೆ.ಎಸ್. ಭವನದವರೆಗೆ ನಡೆದ ಸುಮಾರು 1 ಕಿ.ಮೀ. ಉದ್ದದ ಅದ್ಧೂರಿ ಭಾವೈಕ್ಯತಾ ಮೆರವಣಿಗೆಯಲ್ಲಿ ಕಂಪ್ಲಿ ಆರ್ಯವೈಶ್ಯ ಸಂಘ, ವಾಸವಿ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ, ವಾಸವಿ ಮಹಿಳಾ ಮಂಡಳಿ, ವಾಸವಿ ವಿದ್ಯಾಸಂಸ್ಥೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 320ಕ್ಕೂ ಹೆಚ್ಚು ಆರ್ಯವೈಶ್ಯ, ಆರ್ಯವೈಶ್ಯ ಯುವಜನ ಹಾಗೂ ಆರ್ಯವೈಶ್ಯ ವಾಸವಿ ಮಹಿಳಾ ಸಂಘಗಳ ಪದಾಧಿಕಾರಿಗಳು, ಸದಸ್ಯರು, ವಾಸವಿ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರ್ತಕ ಎಂ. ಮುರಳೀಧರ್ ಶ್ರೇಷ್ಠಿ ಉದ್ಘಾಟಿಸಿದರು. ಬೆಂಗಳೂರು ವೇದಾವತಿ ಅವರು ವಾಸವಿ ಪತಾಕೆ ಗೀತೆ ರಚಿಸಿ ಹಾಡಿದರು. ಸಂಘದ ಉಪಾಧ್ಯಕ್ಷ ಕೆ. ಸುಬ್ರಹ್ಮಣ್ಯಂ, ಕೆ. ರಾಜೇಂದ್ರ, ಗೊಂಟ್ರ ಸುಬ್ಬಾರಾವ್ ಧ್ವಜಾರೋಹಣ ನೆರವೇರಿಸಿದರು. ವೈ. ಪ್ರಭಾಕರಶ್ರೇಷ್ಠಿ ಎಂ. ಬಾಲಸುಬ್ರಹ್ಮಣ್ಯಂ ಶ್ರೇಷ್ಠಿ, ಲಕ್ಷ್ಮೀನಾರಾಯಣಶ್ರೇಷ್ಠಿ ಇದ್ದರು.