ಹಿರೇಮಠ್ ಆರೋಪ ಖಂಡನೀಯ
ಕೊಟ್ಟೂರು: ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ಅವರು ಆರೋಪಿಸಿರುವಂತೆ ಬೆಂಗಳೂರಿನ ಶಿಕ್ಷಕಿ ಸುಪ್ರಿಯಾ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಲಂಚ ನೀಡಿ ಪ್ರಥಮ ರ್ಯಾಂಕ್ ಪಡೆದಿಲ್ಲ. ಬದಲಾಗಿ ಪ್ರತಿಭೆಯಿಂದ ರ್ಯಾಂಕ್ ಗಳಿಸಿದ್ದಾರೆ. ಹಿಂದುಳಿದ ವರ್ಗದ ಈ ಶಿಕ್ಷಕಿ ಮೇಲೆ ಹಿರೇಮಠರು ಪೂರ್ವಗ್ರಹ ಪೀಡಿತರಾಗಿ ಲಂಚ ನೀಡಿಕೆ ಆರೋಪ ಹೋರಿಸಿರುವುದು ಖಂಡನೀಯ ಎಂದು ವಾಲ್ಮೀಕಿ ನಾಯಕರ ಪರಿಷತ್‌ನ ಕೂಡ್ಲಿಗಿ ತಾಲೂಕು ಅಧ್ಯಕ್ಷ ಎಂ. ಶ್ರೀನಿವಾಸ್ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಶಿಕ್ಷಕಿ ಸುಪ್ರಿಯಾ ಲಂಚ ನೀಡಿರುವ ಬಗ್ಗೆ ಬಹಿರಂಗ ಚರ್ಚೆಗೆ ಎಸ್.ಆರ್. ಹಿರೇಮಠ್ ಅವರು ಬರಲಿ. ಪ್ರಥಮ ರ್ಯಾಂಕ್ ಪಡೆಯಲು ಈಕೆಯ ಬದಲಾಗಿ ಇನ್ನೊಬ್ಬಾಕೆ ಅರ್ಹಳು ಎಂದು ಹೇಳಿರುವ ಅವರು, ಆಕೆಯ ಹೆಸರು ಮತ್ತು ಹಿನ್ನೆಲೆಯನ್ನು ಬಹಿರಂಗಪಡಿಸದೆ ಇರುವುದು ಅಚ್ಚರಿಯ ಸಂಗತಿ. ಸಾರಾಸಗಟಾಗಿ ಸುಪ್ರಿಯಾ ಅವರನ್ನು ಗುರಿಯಾಗಿರಿಸಿಕೊಂಡು ಆರೋಪಿಸಿರುವುದು ಎಷ್ಟರ ಮಟ್ಟಿಗೆ ಸರಿ? ಜಾತಿ ಕಾರಣಕ್ಕಾಗಿ ಪ್ರತಿಭೆಯನ್ನು ಒಪ್ಪಿಕೊಳ್ಳದೆ ತಮ್ಮ ಸಂಕುಚಿತ ಮನೋಭಾವವನ್ನು ಹಿರೇಮಠ್ ಈ ರೀತಿ ವ್ಯಕ್ತಪಡಿಸಿರುವುದು ಸರಿಯಲ್ಲ. ಹಿರೇಮಠರು ಇದೆ ರೀತಿ ತಮ್ಮ ಅಸಹನೆಯನ್ನು ತೋರುವ ಮೂಲಕ ಹಿಂದುಳಿದ ವರ್ಗದವರ ಬಗ್ಗೆ ಅನಾಧಾರಣೆ ತೋರಲು ಮುಂದಾದರೆ ಪರಿಷತ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.