ಹೆಣ ಹೂಳಲು ಜನತೆ ಹೆಣಗಾಟ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 22
ಸಿಂಗಟಾಲೂರು ಏತನೀರಾವರಿ ಯೋಜನೆ ಹಿನ್ನೀರಿನಲ್ಲಿ ಮಸಣ ಮುಳುಗಡೆಯಾಗಿದ್ದು, ಸ್ಮಶಾನಕ್ಕೆ ಸೂಕ್ತ ಸ್ಥಳವಿಲ್ಲದೆ ರಸ್ತೆಯ ಬದಿಯಲ್ಲೆ ಹೆಣಗಳನ್ನು ಹೂಳುವ ಪರಿಸ್ಥಿತಿ ಇಲ್ಲಿನ ಜನತೆಗೆ ಒದಗಿ ಬಂದಿದೆ.
ಹೌದು, ತಾಲೂಕಿನ ಮಾಗಳ ಗ್ರಾಮ ತುಂಗಭದ್ರಾ ನದಿ ತೀರದಲ್ಲಿದ್ದು, ವಿವಿಧ ಜನಾಂಗದ ಸುಮಾರು 8-10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನದಿ ತೀರದಲ್ಲೆ ಅನಾದಿ ಕಾಲದಿಂದಲೂ ಹೆಣಗಳನ್ನು ಹೂಳುವುದು ಮತ್ತು ಸುಡುವ ಪರಿಪಾಠವಿತ್ತು.
ಆದರೆ, ತಾಲೂಕಿನ ಅಲ್ಲಿಪುರ ಬಳಿ ನಿರ್ಮಾಣಗೊಂಡ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಗ್ರಾಮದ ಸ್ಮಶಾನ ಸೇರಿದಂತೆ 1050 ಎಕರೆ ರೈತರ ನೀರಾವರಿ ಜಮೀನು ಮುಳುಗಡೆಯಾಗಿದೆ. ಸರ್ಕಾರ ಜಮೀನುಗಳಿಗೆ ಈಗಾಗಲೆ ಪರಿಹಾರ ನೀಡಿದೆ. ಆದರೆ ವಿವಿಧ ಜನಾಂಗಗಳಿಗೆ ಈವರೆಗೂ ಸೂಕ್ತ ಸ್ಮಶಾನ ಅವಕಾಶವನ್ನು ತಾಲೂಕು ಆಡಳಿತ ನೀಡಿದ ತಾಕಣ ರಸ್ತೆಯೆ ಈ ಗ್ರಾಮದ ಜನತೆಗೆ ಸ್ಮಶಾನವಾಗಿದೆ.
ದಾರಿಗೆ ಮುಳ್ಳು, ಕಲ್ಲು: ನದಿ ತೀರದ ಪಕ್ಕದಲ್ಲೆ ಮುಸ್ಲಿಂರ ಈದ್ಗಾ ಮೈದಾನ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ವಿಶೇಷ ಭೂ ಸ್ವಾದೀನಾಧಿಕಾರಿಗಳು ರು. 7 ಲಕ್ಷ ಪರಿಹಾರ ನೀಡಿದ್ದಾರೆ. ಮುಸ್ಲಿಮರ ಈದ್ಗಾಕ್ಕೆ ಹೊಂದಿಕೊಂಡಂತೆ ಹಿಂದೂಗಳ ಸ್ಮಶಾನಕ್ಕೆ ಹೋಗಲು ದಾರಿ ಇತ್ತು. ಆದರೆ ಮುಸ್ಲಿಂ ಜನಾಂಗದವರು ಈದ್ಗಾ ಸುತ್ತಲೂ ತಂತಿ ಬೇಲಿ ಹಾಕಿ, ಕೆಲ ಕಡೆಗಳಲ್ಲಿ ಮುಳ್ಳು ಹಚ್ಚಿ ದಾರಿ ಇಲ್ಲದಂತೆ ಮಾಡಿದ್ದರಿಂದ ಹಿಂದೂಗಳ ಶವ ಹೂಳಲಿಕ್ಕೆ ಹೋಗಲು ದಾರಿ ಇಲ್ಲದೆ ರಸ್ತೆಯೆ ಸದ್ಯ ಸ್ಮಶಾನವಾಗಿದೆ ಎನ್ನುತ್ತಾರೆ ಮಾಗಳ ಗ್ರಾಮಸ್ಥರು.
ಮುಸ್ಲಿಮರ ಈದ್ಗಾ ಮುಳುಗಡೆಯಾಗಿರುವುದರಿಂದ ಇದಕ್ಕೆ ಪರಿಹಾರ ಸಿಕ್ಕರೂ ಮತ್ತೆ ಸರ್ಕಾರ ಆ ಜನಾಂಗಕ್ಕೆ ಸರ್ಕಾರಿ ಭೂಮಿ ನೀಡಿ ಈದ್ಗಾ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಹಿಂದೂಗಳ ಸ್ಮಶಾನವು ಸರ್ಕಾರಿ ಭೂಮಿಯಾಗಿದ್ದರಿಂದ ಇದಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಪರಿಹಾರ ನೀಡಿಲ್ಲ. ನಂತರ ಮುಳುಗಡೆಯಾಗಿರುವ ಸ್ಮಶಾನಕ್ಕೆ ಪರ್ಯಾಯವಾಗಿ ಈವರೆಗೂ ಬೇರೆಡೆ ಸರ್ಕಾರಿ ಭೂಮಿ ನೀಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದರಿಂದ ತಾವು ಬೇಸತ್ತಿರುವುದಾಗಿ ತಮ್ಮ ನೋವು ಹೇಳಿಕೊಳ್ಳುತ್ತಾರೆ ಈ ಗ್ರಾಮದವರು.
ಮುಸ್ಲಿಂ ಈದ್ಗಾಕ್ಕೆ ತಂತಿ ಬೇಲಿ ಮತ್ತು ಮುಳ್ಳು ಹಚ್ಚಿರುವ ಪರಿಣಾಮ ನದಿ ಪಕ್ಕದಲ್ಲಿರುವ ಕುಡಿಯುವ ನೀರಿನ ಪಂಪ್‌ಹೌಸ್‌ಗೆ ಹೋಗಲು ದಾರಿ ಇಲ್ಲದಂತಾಗಿದೆ. ಈದ್ಗಾಕ್ಕೆ ಸೂಕ್ತ ಪರಿಹಾರ ವಿತರಣೆ ಮಾಡಿದ್ದರೂ ನದಿ ತೀರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುತ್ತಿರುವುದು ಇದು ಯಾವ ನ್ಯಾಯ, ಅವರಿಗೆ ನೀಡಿದಂತೆ ಸೂಕ್ತ ಸರ್ಕಾರಿ ಭೂಮಿಯನ್ನು ತಮಗೂ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಾರೆ. ಸೂಕ್ತ ಸರ್ಕಾರಿ ಭೂಮಿ ನೀಡಿ ಹಿಂದೂ ಮತ್ತು ಜೈನರ ಸ್ಮಶಾನಗಳನ್ನು ಅಭಿವೃದ್ಧಿ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ರಸ್ತೆಯಲ್ಲೆ ಹೆಣ ಇಟ್ಟು ಪ್ರತಿಭಟನೆ ಮಾಡುತ್ತೇವೆಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಎಚ್ಚೆತ್ತುಕೊಂಡು, ಹಿಂದೂ, ಮುಸ್ಲಿಮರಲ್ಲಿ ವಿಷಬೀಜ ಬಿತ್ತದೆ ಸಮಾನವಾಗಿ ಸ್ಮಶಾನ ಅಭಿವೃದ್ಧಿಗೆ ಮುಂದಾಗಬೇಕಿದೆ. ಆ ಮೂಲಕ ಗ್ರಾಮದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂಬುದು ಒತ್ತಾಸೆ.
ಚಂದ್ರು ಕೊಂಚಿಗೇರಿ