ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಡು ಕಟ್ಟಿದಂತೆ ಮನಸ್ಸು ಬೆಸೆಯಲಿ

Mainashree
Updated On : 24 Jan 2014, 10:49 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 23
ಕಟ್ಟಡ ನಿರ್ಮಾಣದ ಮೂಲಕ ಸುಂದರ ನಾಡನ್ನು ಕಟ್ಟಿದ್ದೀರಿ, ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ದಿನದಿಂದ ಮನಸ್ಸು ಕಟ್ಟುವ ಕೆಲಸ ಮಾಡಲು ಪಣ ತೊಡಬೇಕೆಂದು ಡಿವೈಎಸ್ಪಿ ಆರ್.ಎಸ್. ಪಾಟೀಲ್ ಭೋವಿ ಸಮಾಜದವರಿಗೆ ಕರೆ ನೀಡಿದರು.
ತಾಲೂಕು ಆಡಳಿತದ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ಅನುಭವ ಮಂಟಪದಲ್ಲಿ ಶಿವ ಶರಣರು ಮಹಿಳೆಯರಿಗೆ ಆದ್ಯತೆ ನೀಡಿದ್ದು ಇತಿಹಾಸ. ಆದರೆ ಇಂದಿನ ಜಯಂತಿಯಲ್ಲಿ ಒಬ್ಬ ಮಹಿಳೆ ಭಾಗವಹಿಸದಿರುವುದು ವಿಷಾದನೀಯ ಎಂದರು.
ಶರಣರ ವೈಚಾರಿಕತೆ, ಸಿದ್ಧಾಂತಗಳನ್ನು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿದಿರಿನಂತೆ ಬೆಳೆದು, ಎಲ್ಲರಿಗೂ ಬೇಕಾಗಿ ಶರಣರ ತತ್ವ, ಚಿಂತನೆ ಮತ್ತು ವಚನಗಳನ್ನು ಅಳವಡಿಸಿಕೊಂಡಾಗ ಉತ್ತಮ ಮನುಷ್ಯನಾಗಲು ಸಾಧ್ಯ ಎಂದರು.
ರಾಮಚಂದ್ರ ಗುಡಿ ಉಪನ್ಯಾಸ ನೀಡಿ, ನಾಡಿನ ಕೋಟೆ ಕೊತ್ತಲು, ಜಲಾಶಯ, ಸುಂದರ ದೇವಾಲಯ ನಿರ್ಮಾಣ ಮಾಡಿರುವ ಭೋವಿ ಸಮಾಜ 8 ನೂರು ವರ್ಷಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಾಜ ಜಾಗೃತಿಯಿಂದ ಸರ್ಕಾರ 841ನೇ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತ ಎಂದರು.
12ನೇ ಶತಮಾನದಲ್ಲೆ ಶಿವ ಶರಣರು ಕೆರೆ ಕಟ್ಟೆಗಳನ್ನು ನಿರ್ಮಿಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಈ ಕಾಯಕದಲ್ಲಿ ಯಾವುದೆ ಸ್ವಾರ್ಥವಿಲ್ಲದೆ ಸಮಾಜದ ಏಳ್ಗೆ ಮಾಡಿದ್ದಾರೆ ಎಂದರು.
ಉಪನ್ಯಾಸಕ ಎಚ್.ಡಿ. ಪೂಜಾರ, ಸತೀಶ ಪಾಸಿ ಮಾತನಾಡಿ, ಎಲ್ಲರ ಮನೆ, ಮನಗಳಲ್ಲಿ ನಿರಂತರವಾಗಿ ವಚನಗಳ ಆಧ್ಯಯನ ನಡೆಯಬೇಕು. ಭೋವಿ ಸಮಾಜಕ್ಕೆ ಶ್ರೀಗಳಿಂದ ನೈತಿಕ ಶಿಕ್ಷಣ ಕೊಡಿಸುವ ಕೆಲಸವು ಸಮಾಜದಿಂದಾಗಬೇಕೆಂದು ಅಭಿಪ್ರಾಯಿಸಿದರು.
ತಾಪಂ ಇಒ ಡಾ.ಎಚ್. ರಂಗಪ್ಪ ಜಯಂತಿಗೆ ಚಾಲನೆ ನೀಡಿದರು. ಪ್ರಭಾರಿ ತಹಸೀಲ್ದಾರ್ ಪ್ರಾಣೇಶ, ಸಮಾಜದ ಅಧ್ಯಕ್ಷ ಭೋವಿ ಶ್ರೀನಿವಾಸ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಿ. ಪ್ರಸನ್ನ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು. ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement