ಪಿಎಸ್ಸೈ ಬಂಡೆ ಪ್ರಕರಣ ಸಿಬಿಐಗೆ ಒಪ್ಪಿಸಲು ಎಬಿವಿಪಿ ಆಗ್ರಹ
ಬಳ್ಳಾರಿ: ಗುಲ್ಬರ್ಗ ಪಿಎಸ್‌ಐ ಮಲ್ಲಿಕಾರ್ಜುನ್ ಬಂಡೆಯವರ ಶೂಟೌಟ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜೇಶ್ವರಿ ಐಟಿಐ ಕಾಲೇಜಿನಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಾಂತೇಶ ನಾಯ್ಕ ಮಾತನಾಡಿ, ಜ. 8ರ ಗುಂಡಿನ ಚಕಮಕಿಯಲ್ಲಿ ಮಲ್ಲಿಕಾರ್ಜುನ ಬಂಡೆಯವರ ತಲೆಗೆ ಗುಂಡೇಟು ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜನವರಿ 16ರಂದು ಮೃತರಾಗಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಸಂಚಿದೆ, ಈ ಸಂಚನ್ನು ಭೇದಿಸಲು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.
ಸಾಮಾನ್ಯವಾಗಿ ಗೂಂಡಾ, ರೌಡಿಗಳನ್ನು ರೌಡಿ ಪಟ್ಟಿಯಿಂದ ಕೈಬಿಡುವುದು ಎಸ್‌ಪಿ ಅವರ ಕರ್ತವ್ಯ. ಆದರೆ ಗುಲ್ಬರ್ಗ ಎಸ್ಪಿ ಊರಿಗೆ ತೆರಳಿದ್ದ ಸಂದರ್ಭ ಸಾಧಿಸಿ ವಜೀರ್ ಅಹ್ಮದ್ ಒಂದೇ ಠಾಣೆ ವ್ಯಾಪ್ತಿಯ ಒಂದೇ ಕೋಮಿಗೆ (ಮುಸ್ಲಿಂ) ಸೇರಿದ 11 ಮಂದಿ ರೌಡಿಗಳನ್ನು, ರೌಡಿಪಟ್ಟಿಯಿಂದ ತೆಗೆಸಿ ಹಾಕಿ ಆದೇಶ ಹೊರಡಿಸಿದ್ದಾರೆ. ಇವರ ಮೂರ್ಖ ಆದೇಶದ ಹಿಂದೆ ಅನೇಕ ಅನುಮಾನಗಳಿವೆ. ಸರ್ಕಾರವು ಐಜಿಪಿ ವಜೀರ್ ಅಹ್ಮದ್‌ನನ್ನು ಅಮಾನತು ಮಾಡಬೇಕು. ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು. ಬಂಡೆ ಕುಟುಂಬಕ್ಕೆ ರು. 1 ಕೋಟಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ರವಿಗೌಡ, ವಿವೇಕ, ಗಿರೀಶ್, ವೆಂಕಟೇಶ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.