ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಜ್ಯ ಸರ್ಕಾರ ವಿದೇಶಿ ಕಂಪನಿ ದಲ್ಲಾಳಿ

Mainashree
Updated On : 24 Jan 2014, 10:50 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 23
ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ದಲ್ಲಾಳಿಯಂತೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ನದಿಗಳ ನೀರನ್ನು ನಮ್ಮ ನಗರದ, ಪಟ್ಟಣಗಳಿಗೆ ಪೂರೈಸಲು ವಿದೇಶಿ ಕಂಪನಿಗಳಿಗೆ ಟೆಂಡರ್ ಕೊಡುತ್ತಿರುವುದು ಎಷ್ಟು ಸರಿ? ಇಷ್ಟಾದರೂ ನಮ್ಮ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತದೆಯೆ ಎಂಬುದನ್ನು ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಸಿಪಿಎಂ ಮುಖಂಡ ಡಾ. ಸಿದ್ಧನಗೌಡ ಪಾಟೀಲ್ ರಾಜ್ಯ ಸರ್ಕಾರದ ಕಾರ್ಯವೈಖರಿ ಟೀಕಿಸಿದರು.
ಅವರು ತಾಲೂಕಿನ ಎಂ.ಬಿ. ಅಯ್ಯನಹಳ್ಳಿಯಲ್ಲಿ ನಡೆದ ಶುದ್ಧಜಲ, ಜೀವಜಲ ಎಂಬ ರಾಜ್ಯಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನತೆಯಿಂದ ಮತ ಪಡೆದು ಅಧಿಕಾರ ಗದ್ದುಗೆ ಹಿಡಿದ ಸರ್ಕಾರಗಳು, ಸ್ವಾತಂತ್ರ್ಯ ಬಂದು 67 ವರ್ಷ ಗತಿಸಿದರೂ ಜನರಿಗೆ ಶುದ್ಧ ನೀರು ಒದಗಿಸದಿರುವುದು ನೋವಿನ ಸಂಗತಿ. ಇದರ ಹಿಂದೆ ಸರ್ಕಾರವನ್ನು ಕೈಗೊಂಬೆಯಂತೆ ಆಡಿಸುವ ವಿದೇಶಿ ಕಂಪನಿಗಳ ಕೈವಾಡವಿದೆ ಎಂದು ದೂರಿದರು.
ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯುರೇನಿಯಂ ಗಾಳಿಯಲ್ಲಿ ಬೆರೆತು ಜನತೆ ಆರೋಗ್ಯ ಹದಗೆಡುತ್ತಿದ್ದರೆ, ಇತ್ತ ರಾಯಚೂರು, ಕೊಪ್ಪಳ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಮುಂತಾದ ಕಡೆ ಅದಿರು, ಗ್ರಾನೈಟ್ ಗಣಿಗಾರಿಕೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ವಿಷಯುಕ್ತ ರಾಸಾಯನಿಕ ಬಳಕೆಯಿಂದ ಜಲಸಂಪತ್ತು ವಿಷಪೂರಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾತಿ ಸುಂದರೇಶ್ ಪ್ರಾಸ್ತಾವಿಕ ಮಾತನಾಡಿ, ಯುವ, ವಿದ್ಯಾರ್ಥಿ, ಮಹಿಳಾ ಮತ್ತು ಇಫ್ಟಾ ಸಂಘಟನೆಗಳ ಸಹಯೋಗದಲ್ಲಿ ಈ ಜನಾಂದೋಲನ ಜಾಗೃತಿ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ನಡೆಯಲಿದೆ. ಸರ್ಕಾರಗಳು ಜನತೆಗೆ ಶುದ್ಧಜಲ ನೀಡುವವರೆಗೂ ಹೋರಾಟ ಕೊನೆಗಾಣದು ಎಂದು ತಿಳಿಸಿದರು. ರಾಜ್ಯದ ಸುಮಾರು 20 ಸಾವಿರ ಹಳ್ಳಿಗಳ ಜನತೆ ವಿಷಯುಕ್ತ ಫ್ಲೋರೈಡ್ ನೀರನ್ನು ದಿನನಿತ್ಯ ಸೇವಿಸುತ್ತಿದ್ದಾರೆ. ಅಲ್ಲದೆ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಶೇ. 70ರಷ್ಟು ಫ್ಲೋರೈಡ್ ಅಂಶ ಕುಡಿವ ನೀರಿನಲ್ಲಿದೆ. ಇಂಥ ಅನಿವಾರ್ಯ ಪರಿಸ್ಥಿತಿಯಲ್ಲಿ ಶಾಶ್ವತ ಪರಿಹಾರಕ್ಕೆ ಜನಾಂದೋಲನ ಹಮ್ಮಿಕೊಂಡು ಬೇಜಾವಾಬ್ದಾರಿ ಸರ್ಕಾರಗಳನ್ನು ಎಚ್ಚರಿಸಲು ಮುಂದಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಟ್ಟೂರು ಚಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಕಾನಮಡುಗು ದಾ.ಮ. ಐಮಡಿ ಶರಣಾರ್ಯರು ಮಾತನಾಡಿದರು. ಕೆ. ಅಯ್ಯನಹಳ್ಳಿ ಶ್ರೀ ಮಹೇಶ್ವರ ಸ್ವಾಮೀಜಿ, ಬೆಣ್ಣೆಹಳ್ಳಿ ಶ್ರೀ ಪಂಚಾಕ್ಷರಿ ಶಿವಾಚಾರ್ಯರು, ಎಐವೈಎಫ್ ರಾಜ್ಯ ಸಂಚಾಲಕ ಎಚ್.ಎಸ್. ಸಂತೋಷ್, ಸಿಪಿಐ ಮುಖಂಡ ಎಚ್. ವೀರಣ್ಣ, ವಕೀಲ ಸಿದ್ಧಲಿಂಗಪ್ಪ, ಜಿಲ್ಲಾಧ್ಯಕ್ಷ ಕಟ್ಟೆಬಸಪ್ಪ, ಗಂಗಾಧರ, ಎಲ್.ಪಿ. ಸುಭಾಷ್‌ಚಂದ್ರ ಬೋಸ್, ಪಾಟೀಲ್ ಶಿವರಾಜ, ವೀಣಾ, ಸುಮಲತಾ, ನಂದಿ ಪಂಪಾಪತಿ, ಕೊಂಬೆಹಳ್ಳಿ ನಾಗರಾಜ, ಇಮಡಾಪುರ ಶಿವರಾಜ, ಮಂಜುನಾಥ, ಚಿಕ್ಕಜೋಗಿಹಳ್ಳಿ ನಾಗರಾಜ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement