ಖಾಸಗಿ ಬಸ್ ನಿಲ್ದಾಣಕ್ಕಿಲ್ಲ ಕಾಯಕಲ್ಪ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 24
ರಾಜ್ಯದಲ್ಲೆ ಸ್ಟೀಲ್ ಸಿಟಿ ಎಂದೆನಿಸಿಕೊಂಡಿರುವ ಬಳ್ಳಾರಿ ನಗರ ಸಮಸ್ಯೆಗಳ ಸರಮಾಲೆಯನ್ನೆ ಹೊತ್ತು ನಿಂತಿದೆ. ಅಂತಹ ಹಲವು ಸಮಸ್ಯೆಗಳಲ್ಲಿ ಬಳ್ಳಾರಿಯ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಯೂ ಒಂದು. ಇಲ್ಲಿ ಇಲ್ಲಗಳದ್ದೇ ಕಾರುಬಾರು ಎನ್ನುವಂತಾಗಿದೆ. ಸರ್ಕಾರಕ್ಕಿಂತ ಖಾಸಗಿ ಸೇವೆ ಉತ್ತಮ ಎನ್ನುವವರಿಗೆ ಈ ಬಸ್ ನಿಲ್ದಾಣ ಕೆಟ್ಟ ಅನುಭವ ನೀಡದೇ ಇರಲಾರದು.
ಖಾಸಗಿ ಬಸ್ ನಿಲ್ದಾಣ ಇಂದು ಬರೀ ಸಮಸ್ಯೆಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಅಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಪ್ರಯಾಣಿಕರ ಯಾತನೆ ಹೇಳತೀರದು. ಇಲ್ಲಿ ಎಲ್ಲವೂ ಇಲ್ಲ ಎಂಬ ಪದಕ್ಕೆ ಪ್ರಥಮ ಪ್ರಾಶಸ್ತ್ಯವಿದೆ. ಹೆಸರಿಗಷ್ಟೆ ಇರುವ ಕಟ್ಟಡವೊಂದನ್ನು ಹೊರತುಪಡಿಸಿದರೆ ನಿಲ್ದಾಣದಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಉತ್ತಮ ಪ್ಲಾಟ್ಫಾರಂ, ಕನಿಷ್ಠ ಮೂಲ ಸೌಲಭ್ಯಗಳು ಇರದೆ ನಾಮಕಾವಸ್ಥೆ ನಿಲ್ದಾಣ ಎಂಬಂತಾಗಿದೆ. ಅಭಿವೃದ್ಧಿ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲದಂತಾಗಿರುವುದು ನಿಜಕ್ಕೂ ಶೋಚನೀಯ.
ಸಂಜೆ 6ರ ನಂತರ ಬಸ್ ಇಲ್ಲ: ಬಸ್ ನಿಲ್ದಾಣ ಎಂದರೆ ದೂರದೂರುಗಳಿಗೆ ತೆರಳಲು ಅನುವುವಾಗಲೆಂದೆ ಹಗಲು, ರಾತ್ರಿ ಸಮಯಕ್ಕನುಗುಣವಾಗಿ ಬಸ್ಗಳನ್ನು ಒಂದೆಡೆ ಕೇಂದ್ರೀಕರಿಸಲು ನಿರ್ಮಿಸಲಾಗಿರುತ್ತದೆ. ಆದರೆ ಇಲ್ಲಿನ ವಿಶೇಷ ಎಂದರೆ ಇದು ಕೇವಲ ಹಗಲು ಹೊತ್ತು ಮಾತ್ರ ತಂಗುದಾಣವಾಗಿರುತ್ತದೆ. ಸಂಜೆ 6 ಗಂಟೆ ನಂತರ ಇಲ್ಲಿ ನೋಡಲು ಒಂದೂ ಬಸ್ ಕಾಣುವುದಿಲ್ಲ. ಒಂದು ವೇಳೆ ಪ್ರಯಾಣಿಕರು ಬಸ್ ನಿಲ್ದಾಣವೆಂದು ಇತ್ತ ಬಂದರೆ ಬರೀ ಕತ್ತಲು, ಹುಳು, ಹುಪ್ಪಡಿಗಳು, ಸೊಳ್ಳೆಗಳೇ ಸ್ವಾಗತ ಕೋರುತ್ತವೆ. ವಿದ್ಯುತ್ ಕಡಿತಗೊಂಡು ಎರಡ್ಮೂರು ತಿಂಗಳು ಕಳೆದರೂ ಕೇಳುವವರು ಯಾರು ಇಲ್ಲ. ಸಂಜೆ 5ರ ತನಕ ಮಾತ್ರ ಇಲ್ಲಿ ಬಸ್ ತಂಗಿಸಲಾಗುತ್ತದೆ ಎನ್ನುತ್ತಾರೆ ಖಾಸಗಿ ಬಸ್ ಚಾಲಕರು, ಕ್ಲೀನರ್ಗಳು.
ಖಾಸಗಿ ಬಸ್ ನಿಲ್ದಾಣ ಅರೆಬರೆ ನಿಲ್ದಾಣವಾಗಿ ರೂಪುಗೊಂಡಿದೆ ಎಂಬುದು ಇತ್ತ ಕಣ್ಣು ಹಾಯಿಸಿದರೆ ತಕ್ಷಣ ಗೋಚರಾಗುತ್ತದೆ. ಬಸ್ಗಳು ನಿಲ್ಲಲು ಇಲ್ಲಿ ಪ್ಲಾಟ್ಫಾರಂ ವ್ಯವಸ್ಥೆಯು ಇಲ್ಲ. ನಿರ್ಮಾಣಕ್ಕಾಗಿ ಮಣ್ಣನ್ನು ಗುಡ್ಡೆ ಹಾಕಿ ಅನೇಕ ದಿನಗಳೆ ಆಗಿವೆಯಾದರೂ, ಕಾಮಗಾರಿಯಾಗದೆ ನಿಶ್ಚಲ ಎಂಬಂತಾಗಿದ್ದು, ಮಳೆ ಬಂದಾಗ ಕೆರೆಯಂತಾಗುವ ಈ ನಿಲ್ದಾಣಕ್ಕೆ ಬಸ್ ಪ್ರವೇಶಿಸಲು, ನಿರ್ಗಮಿಸಲು ಹರಸಾಹಸ ಪಡಬೇಕು.
ಆಸನ ರಹಿತ ನಿಲ್ದಾಣ: ಬಸ್ ನಿಲ್ದಾಣ ಎಂದೆನಿಸಿಕೊಳ್ಳಬೇಕಾದರೆ ಮೊದಲು ಸೂಕ್ತ ಆಸನ ಇರಬೇಕು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ನಿಲ್ದಾಣಕ್ಕೆ ಮೇಲ್ಚಾವಣಿ ಹೊರತುಪಡಿಸಿ ಕೂಡಲು ಒಂದೇ ಒಂದು ಆಸನ ವ್ಯವಸ್ಥೆ ಕಾಣಸಿಗುವುದಿಲ್ಲ. ಪ್ರಯಾಣಿಕರು ನಿಂತು ಸುಸ್ತಾಗಿ ಕೊನೆಗೆ ಬೇರೆ ಗತಿಯಿಲ್ಲದೆ ಬಟ್ಟೆ ಕೊಳೆಯಾದರು ಲೆಕ್ಕಿಸದೆ ನೆಲವನ್ನೇ ಆಸನ ಮಾಡಿಕೊಳ್ಳುತ್ತಾರೆ.
ದುರ್ನಾತವೇ ಇದೆ: ಕಟ್ಟಡವಿದ್ದರೂ ನಿರ್ವಹಣೆ ಇಲ್ಲದೆ ಹಾಳಾಗಿ ಹಲವು ದಿನಗಳೆ ಕಳೆದಿವೆ. ಒಂದು ವೇಳೆ ಶೌಚಾಲಯವೆಂದು ಒಳ ಹೊಕ್ಕರೆ ಅಲ್ಲಿನ ದಿವ್ಯ ದರ್ಶನ ಕಣ್ಣಿಗೆ ರಾಚುತ್ತದೆ. ಬರೀ ಕೊಳಕು, ದುರ್ನಾತವೇ ಅಲ್ಲಿದೆ. ನೀರಿನ ವ್ಯವಸ್ಥೆ, ಸೂಕ್ತ ನಿರ್ವಹಣೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಪುರುಷರೇನೋ ಬಯಲು ಶೌಚಾಲಯದತ್ತ ಮುಖ ಮಾಡಿದರೆ, ಮಹಿಳೆಯರ ಪಾಡು ಹೇಳತೀರದು. ಇದು ಬಳ್ಳಾರಿ ನಗರದ ಪ್ರಮುಖ ಖಾಸಗಿ ಬಸ್ ನಿಲ್ದಾಣವಾಗಿದ್ದರೂ ಇಲ್ಲಿ ಕುಡಿಯುವ, ಬಳಸುವ ನೀರಿನ ವ್ಯವಸ್ಥೆ ಇಲ್ಲ ಎಂದರೆ ಅಚ್ಚರಿಯಾಗಬಹುದು. ಪ್ರಯಾಣಿಕರಿಗಾಗಲಿ, ಬಸ್ ಚಾಲಕ, ನಿರ್ವಾಹಕ ಯಾರಿಗೇ ಆಗಲಿ ತೀರಾ ತುರ್ತು ಪರಿಸ್ಥಿತಿಯಲ್ಲಿ ಒಂದು ಹನಿ ನೀರು ದೊರೆಯದ ದಯನೀಯ ಪರಿಸ್ಥಿತಿ ಈ ಖಾಸಗಿ ನಿಲ್ದಾಣದ್ದಾಗಿದೆ. 2.9 ಎಕರೆ ವಿಸ್ತೀರ್ಣದ ಖಾಸಗಿ ಬಸ್ ನಿಲ್ದಾಣದಲ್ಲಿ ರಾಜ್ಯ ಸೇರಿದಂತೆ ನೆರೆಯ ಆಂಧ್ರದ ಹಲವು ಜಿಲ್ಲೆಗಳಿಗೆ, ಊರುಗಳಿಗೆ ತೆರಳುವ ಬಸ್ಗಳು ತಂಗುತ್ತಿದ್ದು, ಇನ್ನಾದರೂ ಉತ್ತಮ ಕಾಯಕಲ್ಪಗೊಂಡು ಮಾದರಿ ಖಾಸಗಿ ಬಸ್ ನಿಲ್ದಾಣವಾಗಲಿ ಎಂಬುದು ಸ್ಥಳೀಯ ನಿವಾಸಿಗಳ ಆಶಯ.
ಹೆಸರಿಗಷ್ಟೇ ಇದು ಬಸ್ ನಿಲ್ದಾಣ. ಇದರೊಳಾಗ ಕೂಡಲಿಕ್ಕ ವ್ಯವಸ್ಥೆ ಇಲ್ಲ, ಜತಿಗೆ ಕುಡಿಯಾಕ ನೀರು, ಶೌಚಾಲಯ ಏನೂ ಇಲ್ಲ. ಇಲ್ಲಿಂದ ನಮ್ಮ ಊರಿಗೆ ಹೋಗಾಕ ಯಾವ ಬಸ್ ಹೋಗ್ತೈತಿ ಅಂತ ಹೇಳೋರು ಇಲ್ಲಿ ಇಲ್ಲ. ಹಿಂಗ ಆದ್ರ ನಮ್ಮ ಸ್ಥಿತಿ ಹೆಂಗ?
- ಮಲ್ಲಮ್ಮ, ಪ್ರಯಾಣಿಕರು.
ಈಗಾಗಲೆ ಕಟ್ಟಡದ ದುರಸ್ತಿ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು ಕೆಲವೆ ದಿನಗಳಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಆ ನಿರೀಕ್ಷೆಯಲ್ಲಿ ನಾವು ಇದ್ದೇವೆ.
- ರಾಂಪ್ರಕಾಶ್ರೆಡ್ಡಿ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ
-- ವೈ.ಎಂ. ಸಿದ್ಧಲಿಂಗಸ್ವಾಮಿ