ದಲಿತರಿಗೆ ಜಮೀನು ಮರಳಿಸಿ: ಒತ್ತಾಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 24
ಜಿಲ್ಲೆಯ ಹೊಸಪೇಟೆ ತಾಲೂಕಿನ ಸುಗ್ನಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀರಾಮರಂಗಾಪುರ ಗ್ರಾಮದ ದಲಿತರಿಗೆ, ಬಡವರಿಗೆ ಭೂ ನ್ಯಾಯ ಮಂಡಳಿಯು 1978ರಲ್ಲಿ ಮಂಜೂರು ಮಾಡಿದ್ದ ನೂರಾರು ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಕೆಲ ವ್ಯಕ್ತಿಗಳು, ಭೂ ಮಾಲೀಕರು ಒಕ್ಕಲುತನ ಮಾಡುವುದನ್ನು ತಡೆದು, ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಕರಿಯಪ್ಪ ಗುಡಿಮನೆ, ಕರ್ನಾಟಕ ಜನಶಕ್ತಿ ಸಂಘದ ಕುಮಾರ್ ಸಮತಳ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1978 ಸೆ. 27ರಂದು ಅಂದಿನ ಸರ್ಕಾರ ಭೂ ನ್ಯಾಯ ಮಂಡಳಿ ಮೂಲಕ ವಿವಿಧ ಸಮುದಾಯಗಳಿಗೆ ಸೇರಿದ 28 ಜನರಿಗೆ 220 ಎಕರೆ ಜಮೀನು ಪಟ್ಟಾ ಮಂಜೂರು ಮಾಡಿತ್ತು. ಈ ಪೈಕಿ 94 ಎಕರೆಯು 11 ದಲಿತರಿಗೆ(ಮಾದಿಗರಿಗೆ) ಸೇರಿದ್ದು, ಫಾರಂ 10 ಪಟ್ಟಾ ಕೊಡಲಾಗಿತ್ತು. ಆದರೆ ಕಾನೂನು ಬಾಹಿರವಾಗಿ ಕೆಲ ಪಟ್ಟಭದ್ರರು, ಜಮೀನ್ದಾರರು ದೌರ್ಜನ್ಯದಿಂದ ಜಮೀನು ಉಳುಮೆ ಮಾಡುತ್ತಿದ್ದಾರೆ. ಅವರಿಂದ ಆ ಜಮೀನನ್ನು ಬಿಡಿಸಿಕೊಟ್ಟು ವಿವಿಧ ದಲಿತ ಸಮುದಾಯಗಳ ಬಡವರಿಗೆ ಭೂಮಿ ನೀಡಬೇಕು. ಇವರಿಗೆ ಸೂಕ್ತ ರಕ್ಷಣೆ, ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹೊಸಪೇಟೆ ಮಾಜಿ ಶಾಸಕರಾಗಿದ್ದ ದಿ. ಭೀಮನೇನಿ ಕೊಂಡಯ್ಯನವರ ಬಂಧುಗಳು, ಕುಟುಂಬ ವರ್ಗದವರು ದಲಿತರನ್ನು ಬೆದರಿಸಿ ಜಮೀನು ಪಡೆದಿದ್ದಾರೆಂದು ಆರೋಪಿಸಿದ ಅವರು, ಅವರಿಂದ ಆ ಭೂಮಿಯನ್ನು ದಲಿತರಿಗೆ ಕೊಡಿಸಬೇಕು. ಅಕ್ರಮವಾಗಿ ಭೂಮಿ ಪರಭಾರೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ಭೂಮಿಯಿಂದ ವಂಚಿತರಾದ ಬಡ ಕುಟುಂಬಗಳಿಗೆ, ಜಿಲ್ಲಾಡಳಿತದ ಸಮಕ್ಷಮದಲ್ಲಿ ಭೂಮಿ ಮರಳಿಸಬೇಕು. ಮಾದಿಗ ಸಮಾಜದ ಬಂಧುಗಳಿಗೆ ಸೂಕ್ತ ಭದ್ರತೆ, ರಕ್ಷಣೆ ನೀಡಬೇಕು. ಮೂರೂವರೆ ದಶಕಗಳಿಂದ ಜಮೀನುಗಳನ್ನು ತಮ್ಮ ವಶದಲ್ಲಿಟ್ಟುಕೊಂಡು ದಲಿತರಿಗೆ ಅನ್ಯಾಯವೆಸಗಿದ ಭೂ ಮಾಲೀಕರಿಗೆ ದಂಡ ವಿಧಿಸಿ, ಪರಿಹಾರವನ್ನು ವಂಚನೆಗೊಳಗಾದ ಕುಟುಂಬಗಳಿಗೆ ವಿತರಿಸಬೇಕು ಎಂದು ಹೇಳಿದರು.
ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ವಕೀಲ ನರಸಿಂಹರೆಡ್ಡಿ, ವೀರಾಂಜನೇಯ, ಪೆದ್ದಣ್ಣ, ರಾಮುಡು, ರಾಮಚಂದ್ರಪ್ಪ, ವೆಂಕಟಸ್ವಾಮಿ, ಚಿದಾನಂದ, ಮಲ್ಲಮ್ಮ ಸೇರಿದಂತೆ ಇತರರು ಇದ್ದರು.