ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯಶಸ್ವಿ ಸಂದರ್ಶನ ಮೇಳ

Vishwanath S
Updated On : 25 Jan 2014, 12:23 pm

ಬಳ್ಳಾರಿ: ನಗರದ ವೀರಶೈವ ಕಾಲೇಜ್ನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಬುಧವಾರ ಬೃಹತ್ ಸಂದರ್ಶನ ಮೇಳ ಜರುಗಿತು. ಜಾಗತಿಕ ಮಟ್ಟದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯು ನಡೆಸಿದ ಸಂದರ್ಶನದಲ್ಲಿ ನೆರೆಯ ಸಿಂಧನೂರು, ಗಂಗಾವತಿ, ಕೂಡ್ಲಿಗಿ, ಕೊಟ್ಟೂರು, ಹರಪ್ಪನಹಳ್ಳಿ, ಸಿರುಗುಪ್ಪ ಮತ್ತು ಹಗರಿಬೊಮ್ಮನಹಳ್ಳಿ ಕಾಲೇಜುಗಳ ಬಿಎ, ಬಿಎಸ್ಸಿ, ಬಿಬಿಎಂ, ಬಿಕಾಂ ಅಂತಿಮ ವರ್ಷದ 2000ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಟಿಸಿಎಸ್ ಕಂಪನಿಯ 30 ಪರಿಣಿತ ಸಿಬ್ಬಂದಿ, ಸಂವಹನ ಕೌಶಲ್ಯ, ಭಾಷಾ ಪ್ರಭುತ್ವ ಸೇರಿದಂತೆ ಇತರೆ ಮಾನದಂಡಗಳ ಮೂಲಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕಾಲೇಜು ಪ್ರಾಚಾರ್ಯ ಪ್ರೊ.ಪಿ. ಬಸವರಾಜ, ಆಡಳಿತ ಮಂಡಳಿ ಸದಸ್ಯ ಶರಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗ್ನಿ ದುರಂತ: 6 ಜನರಿಗೆ ಗಾಯ
ಕೂಡ್ಲಿಗಿ: ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ಎಡಬಿಡದೆ ಮೂರು ಬಾರಿ ಆಕಸ್ಮಿಕ ಅಗ್ನಿ ದುರಂತಗಳು ಸಂಭವಿಸಿದ್ದು, ಗುಡಿಸಲು, ಬಟ್ಟೆ, ಬರೆ, ದವಸ ಧಾನ್ಯ, ಕಣದಲ್ಲಿದ್ದ ಮೇವು ಸುಟ್ಟು ಹೋಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಎರ್ರಿಸ್ವಾಮಿ, ಬಸಮ್ಮ, ಪಾಪಯ್ಯ ಎಂಬುವವರ ಗುಡಿಸಲು ಸೇರಿ ಒಟ್ಟು 5  ಮನೆಗಳು ಸುಟ್ಟಿವೆ. ಮನೆಯಲ್ಲಿ ಮಲಗಿದ್ದ 6 ಜನರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಅದರಲ್ಲಿ ಎರ್ರಿಸ್ವಾಮಿ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದಲ್ಲದೆ ಕಣದಲ್ಲಿನ 3 ಟ್ರ್ಯಾಕ್ಟರ್ ಮೆಕ್ಕೆಜೋಳ ತೆನೆ, ಮೇವು ಸುಟ್ಟು ಅಂದಾಜು ರು. 3 ಲಕ್ಷ ಮೌಲ್ಯದ ಅಧಿಕ ನಷ್ಟ ಸಂಭವಿಸಿದೆ ಎಂದು ಸಂಡೂರು ಅಗ್ನಿಶಾಮಕ ಠಾಣಾಧಿಕಾರಿ ಜಿ. ಕೃಷ್ಣಸ್ವಾಮಿ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸಂಡೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಕಂಬ ಬದಲಿಸಿ ಅನಾಹುತ ತಪ್ಪಿಸಿ
ಕೊಟ್ಟೂರು: ಪಟ್ಟಣದ ಉಜ್ಜಿನಿ ರಸ್ತೆ ಪಿಎಲ್ಡಿ ಬ್ಯಾಂಕ್ನ ಹಳೆ ಕಟ್ಟಡದ ಬಳಿಯ ನಾಗರಿಕರು ದಿನಂಪ್ರತಿ ಜೀವ ಭಯದಿಂದ ಬದುಕು ಸಾಗಿಸುವಂತಾಗಿದೆ. ರಸ್ತೆಯ ಎಡಭಾಗದಲ್ಲಿ ಜೆಸ್ಕಾಂನ ವಿದ್ಯುತ್ ಕಂಬ ಸಂಪೂರ್ಣ ಶಿಥಿಲಗೊಂಡಿರುವುದು ಇದಕ್ಕೆ ಕಾರಣ.
11 ಕೆವಿ ವಿದ್ಯುತ್ನ್ನು ನಿರಂತರ ಸರಬರಾಜು ಮಾಡುವ ಈ ಕಂಬ ಹಳೆಯದಾಗಿದ್ದು, ಕೆಳಭಾಗದ ಸಿಮೆಂಟ್ ಸಂಪೂರ್ಣ ಕಿತ್ತುಹೋಗಿ ಅದರಲ್ಲಿನ ಕಬ್ಬಿಣದ ರಾಡುಗಳು ಹೊರಚಾಚಿ ತುಕ್ಕು ಹಿಡಿದಿವೆ. ಯಾವುದೆ ಹಂತದಲ್ಲಿ ವಿದ್ಯುತ್ ಕಂಬ ಉರುಳಿ ಬೀಳುವ ಸಾಧ್ಯತೆಗಳು ಬಹಳಷ್ಟಿವೆ. ಒಂದೊಮ್ಮೆ ಕಂಬ ಉರುಳಿ ಬಿದ್ದರೆ ಅದರ ಪರಿಣಾಮ ಬಹಳಷ್ಟು ಪ್ರಮಾಣದಲ್ಲಿ ಆಗುವ ಸಾಧ್ಯತೆಗಳಿವೆ. ಸ್ಥಳೀಯ ಜೆಸ್ಕಾಂ ಅಧಿಕಾರಿಗಳಿಗೆ ಇಲ್ಲಿನ ಜನ ದೂರು ನೀಡಿದ್ದರೂ, ಇಲಾಖೆ ಅಧಿಕಾರಿಯಾಗಲಿ, ಸಿಬ್ಬಂದಿ ಇತ್ತ ಕಡೆ ಗಮನಹರಿಸಿಲ್ಲದಿರುವುದು ಇಲ್ಲಿನ ನಾಗರಿಕರು ನಿತ್ಯ ಭಯಪಡುವಂತಾಗಿದೆ. ವಿದ್ಯುತ್ ಕಂಬ ಮುರಿದು ಬೀಳುವ ಹಂತ ತಲುಪಿದ್ದರೂ ಕಂಬ ಬೇರ್ಪಡಿಸುವ ಕಾರ್ಯಕ್ಕೆ ಜೆಸ್ಕಾಂ ಮುಂದಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಕಂಬ ಬದಲಿಸಬೇಕೆಂದು ಪಪಂ ಸದಸ್ಯ ಚಿರಿಬಿ ಕೊಟ್ರೇಶ್ ಒತ್ತಾಯಿಸಿದ್ದಾರೆ.
ಅವ್ಯವಹಾರ ತಡೆಗೆ ಆಗ್ರಹ
ಹೊಸಪೇಟೆ: ನಗರದ ಸ್ಲಂ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟುವಂತೆ ಒತ್ತಾಯಿಸಿ ಸ್ಲಂ ಜನಜಾಗೃತಿ ಅಂದೋಲನ ಸಮಿತಿ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಕಚೇರಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ನಗರದ ಮೂರುಗೋರಿ, ಪಿಂಜಾರ್ಓಣಿ, ಇಂದಿರಾ ನಗರದಲ್ಲಿರುವ ನ್ಯಾಯಬೆಲೆ ಅಂಗಡಿ ಮತ್ತು ಸೀಮೆಎಣ್ಣೆ ವಿತರಕರು ಸಮರ್ಪಕವಾಗಿ ಸೀಮೆಎಣ್ಣೆ ವಿತರಣೆ ಮಾಡುತ್ತಿಲ್ಲ. ಹೆಚ್ಚಿನ ಹಣಕ್ಕೆ ಬೇರೆಯವರಿಗೆ ಸೀಮೆಎಣ್ಣೆ ಮಾರಿಕೊಳ್ಳುತ್ತಿದ್ದಾರೆ. ಸಾಕಷ್ಟು ಬಡವರು ಸೀಮೆಎಣ್ಣೆಗಾಗಿ ಪರದಾಡುತ್ತಿದ್ದರೂ ಬಡವರಿಗೆ ನೀಡದೆ ಕಡಿಮೆ ಪ್ರಮಾಣದಲ್ಲಿ ಸೀಮೆಎಣ್ಣೆ ವಿತರಿಸಿ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ಕಡ್ಡಾಯವಿಲ್ಲದಿದ್ದರೂ ಕಾರ್ಡ್ ಕಡ್ಡಾಯ ಎನ್ನುವಂತೆ ವರ್ತಿಸುತಿದ್ದಾರೆ. ಬಡವರಿಗೆ ನ್ಯಾಯಯುತವಾಗಿ ಸೀಮೆಎಣ್ಣೆ ಸಮರ್ಪಕವಾಗಿ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ, ಸಂಚಾಲಕಿ ವೆಂಕಮ್ಮ, ಕೆ. ವೆಂಕಟೇಶುಲು, ದೇವಿಕಮ್ಮ, ದ್ಯಾವಮ್ಮ, ಫಾತಿಮಾ, ಶಾಹಿದಾಬಿ, ಷಕೀನಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement