ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮತದಾರರು ಜಾಗ್ರತರಾಗಿ: ನ್ಯಾ. ಪಾಟೀಲ್

Mainashree
Updated On : 26 Jan 2014, 11:23 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 25
ಮತದಾರರು ಜಾಗೃತರಾಗಿ, ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ಅಪರ ಜಿಲ್ಲಾ ನ್ಯಾಯಾಧೀಶ ಎಂ.ಎಸ್. ಪಾಟೀಲ್ ತಿಳಿಸಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಚುನಾವಣಾ ಆಯೋಗ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 18 ವರ್ಷ ಪೂರ್ಣಗೊಂಡ ಅರ್ಹರೆಲ್ಲರೂ ಕಡ್ಡಾಯವಾಗಿ ನೋಂದಣಿ ಮಾಡಿಸಿ, ಮತದಾರ ಚೀಟಿ ಪಡೆದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಯುವಕರು, ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತ ಮತದಾರರ ಸಂಖ್ಯೆಯೆ ಹೆಚ್ಚಾಗಿದ್ದು, ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಎಲ್ಲ ಮತದಾರರು ಮತದಾನ ಮಾಡಬೇಕು. ಮತದಾನದ ಪ್ರಮಾಣ ಹೆಚ್ಚಾದರೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಪ್ರಜಾಪ್ರಭುತ್ವದ ಮೂಲ ತಳಹದಿ ಗಟ್ಟಿಗೊಳ್ಳಲಿದೆ. ಕಾನೂನುಗಳಿಂದಲೆ ಯಶಸ್ಸು ಗಳಿಸುವುದು ಸಾಧ್ಯವಿಲ್ಲ. ಜನರು ಜಾಗೃತರಾಗಿ ಕಾನೂನುಗಳನ್ನು ಅರಿತು ಅನುಸರಿಸಿದಾಗ ಯಶಸ್ಸ ಸಾಧ್ಯ ಎಂದು ತಿಳಿಸಿದರು.
ಜಿಪಂ ಸಿಇಒ ಮಂಜುನಾಥ ನಾಯಕ್ ಮಾತನಾಡಿ, ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಯುವಕರು, ವಿದ್ಯಾರ್ಥಿಗಳು ಮತದಾರರಾಗಿ ನೋಂದಣಿ ಮಾಡಿಸಿ, ನೆರೆ ಹೊರೆಯವರಿಗೂ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ಮತದಾನ ಮಾಡಬೇಕು. ಸೂಕ್ತ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಎಸ್ಪಿ ಡಾ. ಚೇತನ್‌ಸಿಂಗ್ ರಾಠೋಡ್, ಸಹಾಯಕ ಆಯುಕ್ತ ಅನಿರುದ್ಧ್ ಶ್ರವಣ್, ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ, ಡಿಡಿಪಿಐ ವೀರಣ್ಣ ಜತ್ತಿ ಮತ್ತಿತರರು ಇದ್ದರು. ಎಡಿಸಿ ವೆಂಕಟೇಶ್ ಸ್ವಾಗತಿಸಿದರು. ತಹಸೀಲ್ದಾರ್ ಶರಣಪ್ಪ ವಂದಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರು: ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರ ವಿವರ. ಬಳ್ಳಾರಿಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಜಿ. ಉಮ್ಮೆ ಮೊಹಿಸಿನ್ ಪ್ರಥಮ, ಈ. ಮಂಜುಳಾ ದ್ವಿತೀಯ ಹಾಗೂ ಜಿ.ಎಂ. ವಾಣಿ ತೃತೀಯ. ಸರ್ಕಾರಿ ಪಿಯು ಕಾಲೇಜಿನ ಲಕ್ಷ್ಮೀ ಎಂ., ಕಾಂತರಾಜ ಎಚ್. ಹಾಗೂ ಸುಲೋಚನಾ ಕೆ. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ. ಸರ್ಕಾರಿ ಸಂಯುಕ್ತ ಪಿಯು ಕಾಲೇಜಿನ ಮಂಜನಾಥ ಕೆ.ಸಿ. ಪ್ರಥಮ, ಎ. ಸ್ವಾತಿ ಅಗಸಿಮನಿ ದ್ವಿತೀಯ, ಪಿ. ದುರ್ಗೋಚಿ ತೃತೀಯ ಸ್ಥಾನ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆ ಡಿ. ಜಯದೇವ ಪ್ರಥಮ, ಸಂತೋಷ ನಾಯ್ಕ ದ್ವಿತೀಯ, ಆರ್. ಪ್ರಶಾಂತ್ ಕುಮಾರ್ ತೃತೀಯ. ಎಂ. ದಿವ್ಯಜ್ಯೋತಿ ಪ್ರಥಮ, ಜಾನೆಕುಂಟೆ ವೈ. ಸ್ವಾತಿ, ಕುಸುಮಾ ಟಿ. ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement