ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಬಳ್ಳಾರಿ: ಆಂಧ್ರ ಕರ್ನಾಟಕ ಗಡಿಭಾಗದ ಶಿಡಿಗಿನಮೊಳ, ಕಾರೇಕಲ್ ಇತರೆ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಐಡಿವೈಒ, ಆರ್‌ಕೆಎಸ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಕೃಷಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಎ. ದೇವದಾಸ್ ಮಾತನಾಡಿ, ಗಡಿಭಾಗದಲ್ಲಿರುವ ಮೀನಳ್ಳಿ, ಶಿಡಿಗಿನಮೊಳ, ಕಾರೇಕಲ್, ಹಗರಿ ಸೇರಿದಂತೆ ಇತರೆ ಹಲವು ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕಾಗಿ ನಗರಕ್ಕೆ ಆಗಮಿಸುವ ಕಾರ್ಮಿಕರು ಪರದಾಡುವಂತಾಗಿದೆ. ಪಿ.ಡಿ. ಹಳ್ಳಿ, ಹಗರಿ ಮಾರ್ಗವಾಗಿ ಸಾರಿಗೆ ಬಸ್‌ಗಳು ಸಂಚರಿಸಲು ಪರ್ಮಿಟ್ ಇದ್ದರೂ, ಸಾರಿಗೆ ಅಧಿಕಾರಿಗಳು ಮಾತ್ರ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಗ್ರಾಮಗಳಿಗೆ ಸಮರ್ಪಕ ಬಸ್ ಓಡಿಸಬೇಕು. ಈ ಹಿಂದಿನಂತೆಯೆ ಆದೋನಿ, ಕರ್ನೂಲ್ ಕಡೆ ಸಂಚರಿಸುವ ಎಲ್ಲ ಬಸ್‌ಗಳನ್ನು ಹಗರಿ ಮಾರ್ಗವಾಗಿ ಓಡಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 30ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಯಾವುದೆ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೊಮ್ಮೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದ್ದರೂ, ಚಾಲಕ, ನಿರ್ವಾಹಕ, ನಿಯಂತ್ರಾಧಿಕಾರಿಗಳು ಆದೇಶ ಪಾಲಿಸದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ರು. 30 ನೀಡಬೇಕು: ಬಳ್ಳಾರಿಯಿಂದ ಪ್ರತಿದಿನ ರಾತ್ರಿ 9ಕ್ಕೆ ಹಗರಿ, ಮೀನಳ್ಳಿ, ಶಿಡಿಗಿನಮೊಳ ಮಾರ್ಗವಾಗಿ ಕಾರೇಕಲ್ ಗ್ರಾಮಕ್ಕೆ ಸಂಚರಿಸುವ ಬಸ್, ಮರುದಿನ ಬೆಳಗ್ಗೆ 6ಕ್ಕೆ ವಾಪಸ್ಸಾಗಲಿದೆ. ಆದರೆ 9 ಗಂಟೆಗೆ ಆರಂಭವಾಗುವ ಕಾಲೇಜಿಗೆ ಬಸ್‌ಗಳ ಕೊರತೆಯಿಂದಾಗಿ ಬೆಳಗ್ಗೆ 6ರ ಬಸ್ಸಿಗೆ ಬರಬೇಕಿದೆ. 9 ಗಂಟೆ ಬಸ್ ಕೆಲವು ಬಾರಿ ಇರುವುದಿಲ್ಲ. ಇದರಿಂದಾಗಿ ಮತ್ತೆ ಸಂಜೆ 5ರ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲೆ ಕಾದು ಕುಳಿತಿರಬೇಕು. ಅಲ್ಲದೆ ಸಾರಿಗೆ ಇಲಾಖೆಯಿಂದ ಬಸ್‌ಪಾಸ್ ಪಡೆದಿದ್ದರೂ, ಬಸ್ ಕೊರತೆಯಿಂದಾಗಿ ನಿತ್ಯ ರು. 30 ಖಾಸಗಿ ಬಸ್‌ಗಳಿಗೆ ಖರ್ಚು ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು.
ಭರವಸೆ: ಸ್ಥಳಕ್ಕಾಗಮಿಸಿದ ಸಾರಿಗೆ ಇಲಾಖೆ ಲೆಕ್ಕಾಧಿಕಾರಿ ಸೀನಯ್ಯರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾನಿರತರು, ಬಸ್‌ಗಳನ್ನು ಓಡಿಸಲೇಬೇಕೆಂದು ಪಟ್ಟು ಹಿಡಿದರು. ಸೀನಯ್ಯ ಮಾತನಾಡಿ, ಇಂದಿನಿಂದ ಆಂಧ್ರಕ್ಕೆ ಸಂಚರಿಸುವ ಎಲ್ಲ ಬಸ್‌ಗಳನ್ನು ಹಗರಿ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಇದರ ಪರಿವೀಕ್ಷಣೆಗೆ ನಗರದ ಹೊರವಲಯದಲ್ಲಿ ಕಂಟ್ರೋಲ್ ಪಾಯಿಂಟ್ ಗುರುತಿಸಿ, ಸಿಬ್ಬಂದಿ ನೇಮಿಸಲಾಗುವುದು ಎಂದರು.
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ರಂಗಯ್ಯ ಶಿಡಿಗಿನಮೊಳ, ಉಮೇಶ್ ಎನ್., ಆರ್‌ಕೆಎಸ್‌ನ ಈ. ಹನುಮಂತಪ್ಪ, ವಿದ್ಯಾರ್ಥಿಗಳಾದ ರಾಮಕೃಷ್ಣ, ಓಬಳೇಶ್, ಶ್ರುತಿ, ಜಯಶ್ರೀ, ರಾಮತುಳಸಿ, ಸೌಜನ್ಯಾ, ಪ್ರಸಾದ್, ರವಿಕುಮಾರ್, ಉಮೇಶ್, ನೂರಾರು ವಿದ್ಯಾರ್ಥಿಗಳು ಇದ್ದರು.