ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತ ರಕ್ತದಾನ
ಹಗರಿಬೊಮ್ಮನಹಳ್ಳಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿನ ರಕ್ತ ಭಂಡಾರದ ಸಹಯೋಗದಲ್ಲಿ ಪಟ್ಟಣದ ಜ್ಯೂನಿಯರ್ ಕಾಲೇಜಿನ ಎನ್ಎಸ್ಸೆಸ್ಸ್ ಘಟಕ ಮಂಗಳವಾರ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.
ವೈದ್ಯಕೀಯ ಕಾಲೇಜಿನ ಡಾ. ಯಶಸ್ವಿನಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದಿಂದ ಹಲವು ಜೀವಗಳನ್ನು ಉಳಿಸಬಹುದು. ಇಂದು ರಕ್ತದಾನದ ಬಗ್ಗೆ ಸಾಕಷ್ಟು ತಪ್ಪು ಭಾವನೆ ಇದೆ. ಆದರೆ ಅದು ಸರಿಯಲ್ಲ. ಪ್ರತಿ ಮನುಷ್ಯನ ದೇಹದಲ್ಲಿ 5ರಿಂದ 6 ಲೀಟರ್ ರಕ್ತ ಇರುತ್ತದೆ. ರಕ್ತದಾನ ಮಾಡಿದ 24 ಗಂಟೆಯಲ್ಲಿಯೆ ಅಷ್ಟೇ ಪ್ರಮಾಣದ ರಕ್ತ ಸಂಗ್ರಹವಾಗುತ್ತದೆ. ಒಬ್ಬ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುವುದು ಆರೋಗ್ಯದಿಂದಲೂ ಉತ್ತಮ ಎಂದರು.
ಮತೋರ್ವ ವೈದ್ಯ ಡಾ. ಮಧುಸೂದನ್, 45 ಕೆ.ಜಿ. ತೂಕದ 18ರಿಂದ 60 ವಯಸ್ಸಿನವರು ರಕ್ತದಾನ ಮಾಡಬಹುದು. ಕಬ್ಬಿಣದ ಅಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವ ಮೂಲಕ ರಕ್ತಹಿನತೆ ತಪ್ಪಿಸಬಹುದು ಎಂದರು. ಶಿಬಿರದಲ್ಲಿ ಹತ್ತು ಉಪನ್ಯಾಸಕರು, 18ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಕಾಲೇಜು ಪ್ರಾಚಾರ್ಯ ಕೆ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವಿಮ್ಸ್ನ ರಕ್ತಭಂಡಾರದ ಮಂಜುನಾಥ, ರಾಮಮೂರ್ತಿ, ಸಂತೋಷ್, ಗಂಗಮ್ಮ, ಸ್ಥಳೀಯ ಆಸ್ಪತ್ರೆಯ ನಾಗರಾಜ್, ಟಿ.ಎಂ. ಗಂಗಾಧರ, ಜೆ.ಬಿ. ಭರಮನಗೌಡ ಇದ್ದರು. ಈ ಶಿಬಿರದ ನಂತರ ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲೂ ಸಾರ್ವಜನಿಕರಿಂದ ರಕ್ತದಾನ ಶಿಬಿರ ಜರುಗಿತು.