ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಉಗ್ರಾಣ ಸಮಸ್ಯೆ: ರಸ್ತೆ ಮೇಲೆ ಮೆಕ್ಕೆಜೋಳ

Lingaraj Badiger
Updated On : 30 Jan 2014, 12:40 pm

ಹಗರಿಬೊಮ್ಮನಹಳ್ಳಿ: ಖರೀದಿ ಕೇಂದ್ರದಲ್ಲಿ 15 ದಿನಗಳ ಹಿಂದೆ ತೂಕವಾದ ಮೆಕ್ಕೆಜೋಳಕ್ಕೆ ಉಗ್ರಾಣದ ಸಮಸ್ಯೆ ಮುಂದುಮಾಡಿ, ಖರೀದಿ ಕೇಂದ್ರದ ಅಧಿಕಾರಿಗಳು ತಮ್ಮ ಸುರ್ಪದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ ರೈತರು ಇಲ್ಲಿನ ಎಪಿಎಂಸಿಯ ರಸ್ತೆ ಮೇಲೆ ಹಗಲು, ರಾತ್ರಿ ಕಳೆಯುವ ಪರಿಸ್ಥಿತಿ ಬಂದಿದೆ.
ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಸರ್ಕಾರ ತೆರೆದಿರುವ ಮೆಕ್ಕೆಜೋಳದ ಖರೀದಿ ಕೇಂದ್ರಕ್ಕೆ ಈಗ ಉಗ್ರಾಣದ ಸಮಸ್ಯೆ ಎದುರಾಗಿದೆ. ಹೀಗಾಗಿ ಎಪಿಎಂಸಿ ಯಾರ್ಡ್‌ನ ರಸ್ತೆ ಮೇಲೆ ಮೆಕ್ಕೆಜೋಳದ ಸಾವಿರಾರು ಚೀಲಗಳ ರಾಶಿ ಬಿದ್ದಿದೆ. ಉಗ್ರಾಣಕ್ಕೆ ದಾಸ್ತಾನು ತಲುಪಿದ ಮೇಲಷ್ಟೆ ರೈತರಿಗೆ ಅಧಿಕೃತವಾಗಿ ಖರೀದಿ ಬಿಲ್ ನೀಡಲಾಗುತ್ತದೆ. ಅಲ್ಲಿವರೆಗೆ ರೈತರೆ ಮೆಕ್ಕೆಜೋಳದ ಚೀಲಗಳನ್ನು ಕಾಯಬೇಕು.
ಈ ನಡುವೆ ಎಪಿಎಂಸಿ ಯಾರ್ಡ್‌ನಲ್ಲಿ ಹಂದಿಗಳ ಕಾಟ ವಿಪರೀತವಾಗಿರುವುದರಿಂದ ರೈತಬಸವಳಿದು ಹೋಗಿದ್ದಾನೆ. ಹದಿನೈದು ದಿನದ ಹಿಂದೆ ತೂಕ ಮಾಡ್ಯಾರ, ಗೋಡೊನು ಇಲ್ಲ, ಗೋಡೊನು ಸಿಕ್ ಮ್ಯಾಲೆ ನಿಮ್ಮ ಜ್ವಾಳ ಲಿಫ್ಟ್ ಮಾಡ್ತೀವಿ, ಅಲ್ಲಿವರಿಗೆ ಜ್ವಾಳ ಕಾಯ್ರಿ ಎಂದು ಖರೀದಿ ಕೇಂದ್ರದ ಆಫೀಸರ್ ದಿನ ಹೇಳ್ತಾರ. ಹದಿನೈದು ದಿನ ಆತು ನಮಗ ರಸ್ತೆನ ಮನಿ ಆಗೇತಿ ಎಂದು ತಾಲೂಕಿನ ಸೊನ್ನ, ಚಿಕ್ಕಸೊಬಟಿ, ನಾಣ್ಯಾಪುರ ಗ್ರಾಮಕ್ಕೆ ಸೇರಿದ ರೈತರು ತಮ್ಮ ಸಂಕಟ ತೋಡಿಕೊಳ್ಳುತ್ತಾರೆ.
ಪಟ್ಟಣದಲ್ಲಿ ರಾಜ್ಯ ಉಗ್ರಾಣ ನಿಗಮಕ್ಕೆ ಸೇರಿದ ಎರಡು ಹಾಗೂ ಖಾಸಗಿಯವರಿಗೆ ಸೇರಿದ ಐದು ಗೋದಾಮುಗಳಿವೆ. ಈ ಎಲ್ಲವೂ ಈಗ ಭರ್ತಿಯಾಗಿವೆ. ತಾಲೂಕಿನ ಹನಸಿ, ಹಂಪಾಸಾಗರ, ಉಲುವತ್ತಿ ಗ್ರಾಮಗಳಲ್ಲಿ ಖಾಸಗಿಯವರಿಗೆ ಸೇರಿದ ಗೋದಾಮುಗಳಿದ್ದು, ಅವುಗಳ ಪರಿಶೀಲನೆ ಮಾಡುತ್ತಿದ್ದೇವೆ. ಈ ನಡುವೆ ನಮ್ಮ ಖರೀದಿ ಕೇಂದ್ರ ಆರಂಭಕ್ಕೂ ಮುನ್ನ ಪಕ್ಕದ ಹೂವಿನಹಡಗಲಿಯಲ್ಲಿ ಖರೀದಿಸಿದ ಮೆಕ್ಕೆಜೋಳವನ್ನು ಇಲ್ಲಿನ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದೆ. ಆಮೇಲೆ ನಮ್ಮ ಖರೀದಿ ಕೇಂದ್ರದಲ್ಲಿ ಖರೀದಿಸಿದ ಜೋಳವನ್ನು ಸ್ಟಾಕ್ ಮಾಡಿದ್ದೇವೆ. ಹೀಗಾಗಿ ನಮಗೆ ಗೋದಾಮುಗಳ ಸಮಸ್ಯೆ ವಿಪರಿತವಾಗಿ ಕಾಡುತ್ತಿದೆ. ಉಗ್ರಾಣ ಸಿಕ್ಕ ಕೂಡಲೆ ಎಲ್ಲ ಜೋಳವನ್ನು ಲಿಫ್ಟ್ ಮಾಡುತ್ತೇವೆ ಅಲ್ಲಿವರೆಗೆ ರೈತರು ಸಹಕರಿಸಬೇಕು ಎನ್ನುತ್ತಾರೆ ಖರೀದಿ ಕೇಂದ್ರದ ಅಧಿಕಾರಿಗಳು.
ಕೈಗೆ ಬಂದ ಬೆಳೆಯನ್ನು ಸರ್ಕಾರದ ಬೆಂಬಲ ಬೆಲೆ ಆಸೆಗೆ ರೈತರು ಮೆಕ್ಕೆಜೋಳವನ್ನು ಇಲ್ಲಿಗೆ ತಂದು ಮಾರಾಟ ಮಾಡಿದ್ದಾರೆ. ಆದರೆ ಉಗ್ರಾಣದ ವ್ಯವಸ್ಥೆ ಮಾಡುವುದು ಖರೀದಿ ಕೇಂದ್ರದ ಅಧಿಕಾರಿಗಳ ಜವಾಬ್ದಾರಿ. ವಿಳಂಬ ಮಾಡದೆ ಗೋದಾಮು ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು ಎನ್ನುತ್ತಾರೆ ಎಪಿಎಂಸಿ ಸದಸ್ಯ ಹೂಗಾರ ಮಲ್ಲಿಕಾರ್ಜುನ.

ರು. 2.99 ಲಕ್ಷ ಕದ್ದು ಸಿಕ್ಕಿಬಿದ್ದ ನಿರ್ವಾಹಕ

ಹಗರಿಬೊಮ್ಮನಹಳ್ಳಿ: ಪ್ರಯಾಣಿಕರಿಗೆ ಸೇರಿದ ರು. 2.99 ಲಕ್ಷ ಹಣ ಕದ್ದು, ಬೇಡ್‌ಶೀಟ್‌ನಲ್ಲಿ ಸುತ್ತಿ, ಸೀಟಿನ ಕೆಳಗೆ ಇಟ್ಟಿದ್ದ ಸಾರಿಗೆ ಸಂಸ್ಥೆಯ ಐರಾವತ ಬಸ್‌ನ ನಿರ್ವಾಹಕನನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಬುಧವಾರ ಬೆಳಗ್ಗೆ 4.30ಕ್ಕೆ ಬಂಧಿಸಿದ್ದಾರೆ.
ಸಾರಿಗೆ ಸಂಸ್ಥೆ ಶಿವಮೊಗ್ಗ ವಿಭಾಗಕ್ಕೆ ಸೇರಿದ ರುದ್ರೇಶ್ ಎಂಬಾತನೆ ಪ್ರಯಾಣಿಕರ ಹಣ ಕದ್ದ ನಿರ್ವಾಹಕ. ಆತನನ್ನು ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಗಂಗಾವತಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸ್ಥಳೀಯ ಪಿಎಸೈ ಕಾಶೀನಾಥ ತಿಳಿಸಿದರು.
ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ಸಂಚರಿಸುತ್ತಿದ್ದ ಐರಾವತ ಬಸ್‌ನಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ಗಂಗಾವತಿಯ ಪ್ರಯಾಣಿಕರೊಬ್ಬರು ಹಣದೊಂದಿಗೆ ಪ್ರಯಾಣಿಸುತ್ತಿದ್ದರು. ಗಂಗಾವತಿ ನಿಲ್ದಾಣದಲ್ಲಿ ಅವರು ಹಣದ ಚೀಲ ಮರೆತು ಇಳಿದಿದ್ದಾರೆ. ಆನಂತರ ಹಣಕ್ಕಾಗಿ ಹುಡುಕಾಡಿದ್ದಾರೆ. ಕೊನೆಗೆ ಬಸ್‌ನಲ್ಲಿ ಹಣದ ಚೀಲ ಬಿಟ್ಟ ವಿಷಯವನ್ನು ಗಂಗಾವತಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೆ ಗಂಗಾವತಿ ಪೊಲೀಸರು ಹಗರಿಬೊಮ್ಮನಹಳ್ಳಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹಗರಿಬೊಮ್ಮನಹಳ್ಳಿ ರೇಲ್ವೆ ಗೇಟ್ ಬಳಿ ಬಸ್ ತಡೆದು ಪರಿಶೀಲಿಸಿದಾಗ ಬೇಡ್‌ಶೀಟ್‌ನಲ್ಲಿ ಹಣ ಸುತ್ತಿ ಸೀಟ್ ಕೆಳಗೆ ಇಟ್ಟಿರುವುದ ಪತ್ತೆಯಾಯಿತು ಎಂದು ಕಾಶೀನಾಥ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement