ರಾಷ್ಟ್ರೋತ್ಥಾನ ಸಿಬಿಎಸ್‌ಇ ಶಾಲೆ: ಗಣರಾಜ್ಯೋತ್ಸವ
ಹಗರಿಬೊಮ್ಮನಹಳ್ಳಿ: ವಿಶ್ವಕ್ಕೆ ಬೆಳಕು ನೀಡುವಂತ ಲಕ್ಷಾಂತರ ದೇಶಭಕ್ತರು, ಮಹಾತ್ಮರು ಭಾರತ ದೇಶದ ನೆಲದಲ್ಲಿ ಜನಿಸಿದ್ದಾರೆ. ಇಂತಹ ಮಹಾನ್ ಪುರುಷರಿಗೆ ಜನ್ಮ ನೀಡಿದ ನಮ್ಮ ದೇಶ ಇಂದು ಜಗತ್ತಿನಲ್ಲಿಯೆ ಅತ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿ, ಯುವಕರ ಮೇಲಿದೆ ಎಂದು ರಾಷ್ಟ್ರೋತ್ಥಾನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ದುರ್ಗಣ್ಣ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಭಕ್ತರು ಕಟ್ಟಿರುವ ನಮ್ಮ ರಾಷ್ಟ್ರದ ಸಂರಕ್ಷಣೆಯೆ ನಮ್ಮೆಲ್ಲರ ಆದ್ಯ ಕೆಲಸವಾಗಬೇಕು ಎಂದರು.
ವಿದ್ಯಾರ್ಥಿಗಳಿಗಾಗಿ ಭಾಷಣ, ಗಣರಾಜ್ಯೋತ್ಸವದ ಸಂಭಾಷಣೆ, ವಂದೇಮಾತರಂ ಗೀತೆಯ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾರತ ಮಾತೆಯ ಪೂಜೆಯೊಂದಿಗೆ ರಾಷ್ಟ್ರಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಿರಬೇಕು ಎಂಬ ಸಂಕಲ್ಪವನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಕೈಗೊಂಡರು. ಸಂಸ್ಥೆಯ ಪ್ರಾಚಾರ್ಯ ಜಿ. ರಂಗನಾಥ ಸ್ವಾಗತಿಸಿದರು. ಫೃಥ್ವಿ ವಿ. ಸಿಂಹ ಮತ್ತು ನಂದೀಶ ಎ.ಎಂ. ನಿರೂಪಿಸಿದರು.