ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ ಬಿಜೆಪಿ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 30
ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.
ರೈತ ಅಧಿಕಾರ ದಿವಸ್ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ರಾಜ್ಯ ಸರ್ಕಾರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ರಾಸಾಯನಿಕಗೊಬ್ಬರದ ಅವೈಜ್ಞಾನಿಕ ಸಬ್ಸಿಡಿ ನೀತಿಯನ್ನು ಕೈಬಿಡಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಪಡಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಗೊಬ್ಬರ ಬೆಲೆ ದುಪ್ಪಟ್ಟು: ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ಸೋಮಲಿಂಗಪ್ಪ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರೈತರಿಗೆ ಅನುಕೂಲವಾಗಲಿರುವ ಸ್ವಾಮಿನಾಥನ್ ಆಯೋಗವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ರುಪಾಯಿ ಮೌಲ್ಯ ಕುಸಿತ ಪರಿಣಾಮ ನೇರವಾಗಿ ರಾಸಾಯನಿಕಗೊಬ್ಬರಗಳ ಕಚ್ಚಾ ಪದಾರ್ಥಗಳ ಮೇಲೆ ಬೀರಲಿದೆ. ಅಲ್ಲದೇ, ನ್ಯೂ ಟ್ರೆಂಟ್ ಬೇಸ್ಡ್ ಸಬ್ಸಿಡಿ ನೀತಿಯಿಂದಾಗಿ ಗೊಬ್ಬರಗಳ ಬೆಲೆ ನಿಗದಿಗೊಳಿಸುವ ಅವಕಾಶ ಕೇಂದ್ರ ಸರ್ಕಾರ ತಯಾರಕರಿಗೆ ನೀಡಿದೆ. ಇದರಿಂದಾಗಿ ಗೊಬ್ಬರ ಬೆಲೆ ನಿರಂತರವಾಗಿ 200-300 ಪಟ್ಟು ಹೆಚ್ಚುತ್ತಲೆ ಸಾಗಿದೆ. ಹೀಗಾಗಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿನ ಟರಿಫ್ ಬೇಸ್ಡ್ ಕಂಟ್ರೋಲ್ ಸಿಸ್ಟಂನ್ನು ಅಳವಡಿಸಬೇಕು ಎಂದು ತಿಳಿಸಿದರು.
ಬೆಲೆ ನಿಗದಿ ಮಾಡಿ: ದೇಶದಲ್ಲಿ ಎರಡನೇ ಅತಿಹೆಚ್ಚು ಕಬ್ಬು ಬೆಳೆಯುವ ರಾಜ್ಯವಾದ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ದಬ್ಬಾಳಿಕೆ ಕಬ್ಬು ಬೆಳೆಗಾರರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಸಮಯಕ್ಕೆ ಸರಿಯಾಗಿ ಕಬ್ಬು ಕಟಾವಿಗೆ ಅನುಮತಿ ನೀಡುತ್ತಿಲ್ಲ. ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಹಣ ರೈತರಿಗೆ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ. ಹೀಗಾಗಿ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು, ಟನ್ ಕಬ್ಬಿಗೆ ರು. 3000 ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಹಾರ ನೀಡಿ: ರಾಜ್ಯ ಸರ್ಕಾರ ಘೋಷಿಸಿರುವ 85 ಬರ ಪೀಡಿತ ತಾಲೂಕುಗಳ ರೈತರಿಗೆ ಮಹಾರಾಷ್ಟ್ರದ ವಿದರ್ಭ ಪ್ರಾಂತದ ಮಾದರಿಯಲ್ಲಿ ಪರಿಹಾರ ನೀಡಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ಕಾಲುಬಾಯಿ ರೋಗದಿಂದ ಮೃತಪಟ್ಟ ಸುಮಾರು 1500 ಜಾನುವಾರುಗಳಿಗೆ ಕೂಡಲೆ ಪರಿಹಾರ ವಿತರಿಸಬೇಕು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರೈತರಿಗೆ 3 ಫೇಸ್ ವಿದ್ಯುತ್ ಸರಬರಾಜ ಮಾಡಬೇಕು. ತೊಗರಿ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ಅಸ್ತಿತ್ವಗೊಳಿಸಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀನಿವಾಸ ವ್ಯಾಸನಕೇರಿ, ಮಾಜಿ ಅಧ್ಯಕ್ಷ ವಿರೂಪಾಕ್ಷಗೌಡ, ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಮಚಂದ್ರಯ್ಯ, ಕೆ.ಎಂ. ಜಯಗೋಪಾಲ್, ಸುಧೀರ್‌ಕುಮಾರ್, ಆರ್. ಚಿನ್ನದೊರೈ, ಕೆ.ಆರ್. ಮಂಜುನಾಥ್‌ಗೌಡ, ಮಲ್ಲಿಕಾರ್ಜುನ ರೆಡ್ಡಿ, ಮಲ್ಲಿಕಾರ್ಜುನ ಶಂಕರಬಂಡೆ, ಅನಿಲ್ ನಾಯ್ಡು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.