ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೆಗ್ಗನಹಳ್ಳಿ ಬಹಿಷ್ಕಾರ ಪ್ರಕರಣ: ಖಂಡನೆ

Vishwanath S
Updated On : 1 Feb 2014, 10:53 am

ಬಳ್ಳಾರಿ: ಕೋಲಾರ ಜಿಲ್ಲೆ ಕೆಗ್ಗನಹಳ್ಳಿಯಲ್ಲಿ ಹರಿಜನರನ್ನು ಗ್ರಾಮದಿಂದ ಬಹಿಷ್ಕರಿಸಿ ಕಟ್ಟಾಜ್ಞೆ ಹೊರಡಿಸಿರುವ ಸವರ್ಣೀಯರ ಕ್ರಮವನ್ನು ಬಳ್ಳಾರಿ ಜಿಲ್ಲಾ ಡಾ. ಬಿ.ಆರ್.ಅಂಬೇಡ್ಕರ್ ಸಂಘ ತೀವ್ರವಾಗಿ ಖಂಡಿಸಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಎಂ.ವಿ. ಎರುಕಲಸ್ವಾಮಿ, ಗ್ರಾಮದ ನಾಲ್ಕು ಸವರ್ಣೀಯರು ಧ್ವನಿವರ್ಧಕ ಮೂಲಕ ಸ್ಥಳೀಯ ಹರಿಜನ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದು, ಇವರೊಂದಿಗೆ ಯಾರಾದರು ಮಾತನಾಡಿದ್ದಲ್ಲಿ ರು. 501, ಕೊಳವೆ ಬಾವಿಗಳಿಂದ ನೀರು ಕೊಟ್ಟಲ್ಲಿ ರು. 1001 ದಂಡ ಹಾಗೂ ಅಂಗಡಿಗಳಲ್ಲಿ ದಲಿತರಿಗೆ ಯಾವುದೇ ವಸ್ತುಗಳು ನೀಡುವಂತಿಲ್ಲ ಎಂದು ಆಜ್ಞಾಪಿಸಿರುವುದು ಖಂಡನಾರ್ಹ. ಸಮಾನತೆ ಸಾರಲೆಂದು ಸಂವಿಧಾನದಲ್ಲಿ ಸೂಚಿಸಿದ್ದರೂ ದಲಿತರ ಮೇಲಿನ ಬಹಿಷ್ಕಾರ, ದೌರ್ಜನ್ಯ, ದಬ್ಬಾಳಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರಗಳಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಿನ್ನೆಲೆ: ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಖಾಲಿಯಿದ್ದ ಹುದ್ದೆಗೆ ಹರಿಜನ ಮಹಿಳೆ ಅರ್ಜಿ ಹಾಕಿದ್ದು ಹಾಗೂ ಸಂಕ್ರಾಂತಿ ಹಬ್ಬದಂದು ಸವರ್ಣೀಯರಿಗೂ ಮುನ್ನವೇ ಹರಿಜನರು ದನಗಳನ್ನು ಪೂಜಿಸಿ ಮೆರವಣಿಗೆ ನಡೆಸಿದ್ದರು. ಇದನ್ನು ಪ್ರಶ್ನಿಸಿದ ಸವರ್ಣೀಯರು ಸ್ಥಳೀಯ ಗ್ರಾಪಂ ಸದಸ್ಯ ಹರಿಜನ ಮುನಿಸ್ವಾಮಪ್ಪ, ಮುನಿವೆಂಕಟಪ್ಪ, ಪಾಪಣ್ಣ, ಕೃಷ್ಣಪ್ಪರ ನಾಲ್ಕು ಕುಟುಂಬಗಳನ್ನು ಗ್ರಾಮದಿಂದ ಬಹಿಷ್ಕರಿಸಿದ್ದಾರೆ. ದಲಿತ ಮಹಿಳೆಯರು ನೌಕರರಾದರೆ ಅವರು ಮಾಡುವ ಅನ್ನವನ್ನಾದರೂ ಸವರ್ಣೀಯರ ಮಕ್ಕಳು ಹೇಗೆ ತಿನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮಾರಕಾಸ್ತ್ರಗಳಿಂದ ದಲಿತ ಕುಟುಂಬಗಳ ಮೇಲೆ ಹಲ್ಲೆ ನಡೆಸುವುದಾಗಿ ಗ್ರಾಮದ ಶಂಕರರೆಡ್ಡಿ, ಆಂಜನೇಯರೆಡ್ಡಿ, ಕೇಶವಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ಗಟ್ಟೆಪ್ಪ ಇತರೆ ಸವರ್ಣೀಯರ ಗುಂಪು ಜೀವ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸಿ, ಗಡಿಪಾರು ಮಾಡಬೇಕು. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು. ದಿನಬಳಕೆ ವಸ್ತುಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement