ಬಳ್ಳಾರಿ: ಇಂದಿನಿಂದ ಪಡಿತರ ಖಾತ್ರಿ
ಬಳ್ಳಾರಿ: ಸರ್ಕಾರ ಫೆಬ್ರವರಿ 1ರಿಂದ ಪಡಿತರ ಖಾತರಿ ಯೋಜನೆ ಜಾರಿಗೆ ತರಲಿದ್ದು, ಈ ಯೋಜನೆಯಡಿ ಇನ್ಮುಂದೆ ಪ್ರತಿ ತಿಂಗಳು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋದಿ ಮತ್ತು ಸಕ್ಕರೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿ ಮಾಲಿಕರು ಪ್ರತಿ ತಿಂಗಳ 1ರಿಂದ 10ರ ವರೆಗೆ ಪಡಿತರ ಚೀಟಿದಾರರಿಗೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ (ಊಟದ ವೇಳೆ ಮಧ್ಯಾಹ್ನ 1ರಿಂದ 2ರ ವರೆಗೆ ಹಾಗೂ ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ) ಕಡ್ಡಾಯವಾಗಿ ಪಡಿತರ ಧಾನ್ಯ ವಿತರಿಸಬೇಕು.
ಉಳಿದಂತೆ ದಿನಾಂಕ 11ರಿಂದ 30ರ ವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಮತ್ತು ಸಂಜೆ 4ರಿಂದ 8ಗಂಟೆ ವರೆಗೆ(ಮಂಗಳವಾರ ಹೊರತುಪಡಿಸಿ) ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ. ಈಗಾಗಲೇ ಫೆಬ್ರವರಿ ಮಾಹೆಯ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ನ್ಯಾಯಬೆಲೆ ಅಂಗಡಿಯವರು ಆಹಾರ ಧಾನ್ಯಗಳನ್ನು ಸಗಟು ಕೇಂದ್ರಗಳಿಂದ ಎತ್ತುವಳಿ ಮಾಡಿ ತಮ್ಮ ಅಂಗಡಿಗಳಲ್ಲಿ ದಾಸ್ತಾನು ಮಾಡಿಕೊಳ್ಳಬೇಕು. ಪಡಿತರ ಚೀಟಿದಾರರ ಮಾಹಿತಿಗಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಬಿಪಿಎಲ್, ಎಎವೈ ಪಡಿತರ ಚೀಟಿಗಳ ಪಟ್ಟಿ ಪ್ರಚುರಪಡಿಸಲಾಗಿದೆ.
ಪ್ರಮಾಣ, ದರ: ಫೆಬ್ರವರಿ ಮಾಹೆಯಲ್ಲಿ ಒಂದು ಯೂನಿಟ್ ಕಾರ್ಡ್ದಾರರಿಗೆ 6 ಕೆಜಿ ಅಕ್ಕಿ, 4 ಕೆಜಿ ಗೋದಿ, 2 ಯೂನಿಟ್ ಕಾರ್ಡ್ದಾರರಿಗೆ 14 ಕೆಜಿ ಅಕ್ಕಿ, 6 ಕೆಜಿ ಗೋದಿ, 3 ಮತ್ತು ಹೆಚ್ಚು ಸದಸ್ಯರಿರುವ ಕಾರ್ಡ್ದಾರರಿಗೆ 20 ಕೆಜಿ ಅಕ್ಕಿ, 10 ಕೆಜಿ ಗೋದಿ ವಿತರಣೆ ಮಾಡಲಾಗುವುದು. ಅಕ್ಕಿ ಮತ್ತು ಗೋದಿ ದರವನ್ನು ಪ್ರತಿ ಕೆಜಿಗೆ ರು. 1 ಎಂದು ನಿಗದಿಪಡಿಸಲಾಗಿದೆ.
ಆಹಾರ ಧಾನ್ಯ ಲಭ್ಯತೆ: ಫೆಬ್ರವರಿಯಲ್ಲಿ ಎಎವೈ ಕಾರ್ಡ್ದಾರರಿಗೆ ವಿತರಿಸಲು 18550 ಕ್ವಿಂ. ಅಕ್ಕಿ, 3890 ಕ್ವಿಂ. ಗೋದಿ, ಬಿಪಿಎಲ್ ಕಾರ್ಡ್ದಾರರಿಗೆ 55880 ಕ್ವಿಂ. ಅಕ್ಕಿ ಮತ್ತು 27770 ಕ್ವಿಂ. ಗೋದಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಪಡಿತರ ಚೀಟಿದಾರು ನ್ಯಾಯಬೆಲೆ ಅಂಗಡಿಯಿಂದ ಕಡ್ಡಾಯವಾಗಿ ಬಿಲ್ ಪಡೆದು ದರ ಮತ್ತು ಪ್ರಮಾಣವನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.