ಹಣ ದ್ವಿಗುಣಗೊಳಿಸುವುದಾಗಿ ವಂಚನೆ: ಹೇಳಿಕೆ ಪಡೆದ ಸಿಐಡಿ
ಕೊಟ್ಟೂರು: ರಾಂಚಿ ಮೂಲದ ಜೀನತ್ ಮಾರ್ಕೆಟೆಂಗ್ ಮತ್ತು ಕನ್ಸ್ಲ್ಟೆನ್ಸಿ ಕಂಪನಿ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಜನರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಂಚನೆಗೊಳಗಾದವರಿಂದ ಗುರುವಾರ ಸಂಜೆ ಹೇಳಿಕೆ ಪಡೆದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಸಿಐಡಿ ಪೊಲೀಸ್ ತಂಡದ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ಜೀನತ್ ಕಂಪನಿಯಲ್ಲಿ ಹಣತೊಡಗಿಸಿದ್ದ ಸ್ಥಳೀಯ ವಿ.ಎಂ. ಸೋಮನಾಥ ಮತ್ತಿತರರಿಂದ ಸಮಗ್ರ ಮಾಹಿತಿ ಕಲೆ ಹಾಕಿದರು.
2008ರಲ್ಲಿ ಜೀನತ್ ಕಂಪನಿಯ ಯೋಜನೆಯಡಿ ಹಣ ತೊಡಗಿಸುವಂತೆ ಹೇಳಿ ಹರಪನಹಳ್ಳಿಯ ಪ್ರೌಢಶಾಲೆಯ ಶಿಕ್ಷಕ ಬಸವರಾಜ್ ಮಲ್ಲಪ್ಪ ಅನೇಕರಿಂದ ಲಕ್ಷಾಂತರ ರುಪಾಯಿ ಸಂಗ್ರಹಿಸಿದ್ದರು. ಕಂಪನಿಯಲ್ಲಿ ಅನೇಕ ವಕೀಲರು, ಪೊಲೀಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಹಣ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಅನೇಕರು ಹಣ ಹೂಡಿದ್ದರು. ಕೆಲ ತಿಂಗಳ ನಂತರ ಯಾರಿಗೂ ಕಮಿಷನ್ ಹಣ ಬರಲಿಲ್ಲ. ಹೂಡಿದ ಹಣವೂ ಬರಲಿಲ್ಲ. ಕೇಳಿದರೆ ಸಲ್ಲದ ಕಾರಣ ಹೇಳಿ ಬಸವರಾಜ ತಪ್ಪಿಸಿಕೊಳ್ಳುತ್ತಿದ್ದ ಎಂದು ವಂಚನೆಗೊಳಗಾದವರು ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಸ್ಐ ವೆಂಕಟೇಶ್, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಪಟ್ಟಣಗಳಲ್ಲಿ ಜೀನತ್ ಕಂಪನಿ ವಿರುದ್ಧ ದೂರು ದಾಖಲಾಗಿದ್ದವು. ರಾಂಚಿಯಲ್ಲಿ ಕಚೇರಿ ಹೊಂದಿರುವ ಕಂಪನಿ ಅಂದಾಜು ರು. 7.5 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ.
ಬಳ್ಳಾರಿ, ಹೊಸಪೇಟೆ, ಹಡಗಲಿ, ದಾವಣಗೆರೆ, ಹರಿಹರ, ಮರಿಯಮ್ಮನಹಳ್ಳಿ ಸೇರಿ ರಾಜ್ಯದ ಅನೇಕ ಕಡೆ ಜನ ವಂಚನೆಗೆ ಒಳಗಾಗಿರುವ ದೂರು ಕೇಳಿ ಬಂದಿದೆ. ಸಿಐಡಿ ಡಿವೈಎಸ್ಪಿ ಶಮಿವುಲ್ಲಾ ವಿಚಾರಣೆ ನೇತೃತ್ವ ವಹಿಸಿದ್ದಾರೆ. ಹರಪನಹಳ್ಳಿ ಠಾಣೆ ಪೇದೆ ಧರ್ಮಪ್ಪ ಇದ್ದರು.