ಸಹಕಾರಿ ಕ್ಷೇತ್ರ ಆರ್ಥಿಕ ವ್ಯವಹಾರಕ್ಕೆ ಸೀಮಿತವಲ್ಲ
ಹೊಸಪೇಟೆ: ಸಹಕಾರಿ ಕ್ಷೇತ್ರ ಹಣಕಾಸು ವ್ಯವಹಾರ ನಡೆಸುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಕ್ಷೇತ್ರದಲ್ಲಿ ಇರುವವರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜೆ.ಎಂ. ವೃಷಭೇಂದ್ರಸ್ವಾಮಿ ಹೇಳಿದರು.
ನಗರದ ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ಕಚೇರಿಯಲ್ಲಿ ಸ್ವಾತಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಕುರಿತ ಉಪನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯ ಯಶಸ್ವಿಗೆ ಎಲ್ಲ ಸಹಕಾರಿ ಬಂಧುಗಳು ಸಹಕರಿಸಬೇಕು. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗಳಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ನಗರ ವಾಸಿಗಳೂ ಸಮರ್ಪಕ ಚಿಕಿತ್ಸೆ ಪಡೆಯುವಂತಾಗಬೇಕು ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಎಲ್.ಎಸ್. ಆನಂದ ಮಾತನಾಡಿ, ಕೇವಲ ಗ್ರಾಮೀಣ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಜನರಿಗೂ ಸರ್ಕಾರ ವಿಸ್ತರಿಸಿರುವುದು ಸ್ವಾಗತಾರ್ಹ ಎಂದರು.
ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಹಿರೇಮಠ ಮಾತನಾಡಿ, ಗ್ರಾಮೀಣ ಜನರನ್ನು ಪರಿಣಾಮಕಾರಿ ತಲುಪಲು ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದರು.
ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಹನುಮಂತರಾವ್ ಮಾತನಾಡಿದರು. ನಂತರ ಬಳ್ಳಾರಿ ಜಿಲ್ಲಾ ಉಪ ನಿಬಂಧಕ ಡಾ. ಜಿ. ಉಮೇಶ್ ಉಪನ್ಯಾಸ ನೀಡಿದರು. ಸ್ವಾತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ. ನೀಲಕಂಠಯ್ಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಗೌಳಿಗರ ವಿವಿಧೋದ್ದೇಶ ಸೌಹಾರ್ಹ ಸಹಕಾರಿ ನಿಯಮಿತದ ಅಧ್ಯಕ್ಷ ಗೌಳಿ ಕುಮಾರ, ಶಂಕರಾಚಾರ್ಯ ಇದ್ದರು.
ಕೆ. ನಾಗರತ್ನಾ ಸ್ವಾಗತಿಸಿದರು.
ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಯಶಸ್ಸಿಗೆ ಎಲ್ಲ ಸಹಕಾರಿ ಬಂಧುಗಳು ಸಹಕರಿಸಿ. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಆರ್ಥಿಕವಾಗಿ ಹಿಂದುಳಿದ ನಗರ ವಾಸಿಗಳೂ ಸಮರ್ಪಕ ಚಿಕಿತ್ಸೆ ಪಡೆಯುವಂತಾಗಬೇಕು.
-ಜೆ.ಎಂ. ವೃಷಭೇಂದ್ರಸ್ವಾಮಿ
--