ಉತ್ತಮ ಸಮಾಜಕ್ಕೆ ಪತ್ರಕರ್ತರ ಅಗತ್ಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 6
ಸಮಾಜದಲ್ಲಿ ರಾಜಕಾರಣಿಗಳು, ಪತ್ರಕರ್ತರು ಮತ್ತು ಅಧಿಕಾರಿಗಳು ಸಮಾನ ಜವಾಬ್ದಾರಿಗಳಾಗಿದ್ದು, ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಡತೆ ಮತ್ತು ಸ್ಪಷ್ಟ ಬರವಣಿಗೆ ಪತ್ರಕರ್ತರನ್ನು ಉನ್ನತ ಸ್ಥಾನಕ್ಕೆ ಏರಿಸುತ್ತವೆ. ಅಷ್ಟೊಂದು ಶಕ್ತಿ ಹೊಂದಿರುವ ಪತ್ರಿಕಾರಂಗ ಸರ್ಕಾರವನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತದೆ ಎಂದರು.
ನನಗೆ ಪ್ರಚಾರದ ಹುಚ್ಚು ಇಲ್ಲದ ಕಾರಣ ಪತ್ರಕರ್ತರಿಗೆ ಸಿಗುತ್ತಿಲ್ಲ. ಆದರೆ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆಂದು ಜನರಿಗೆ ತಪ್ಪು ಸಂದೇಶ ನೀಡುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ಸದನ ಆರಂಭದಿಂದ ಈವರೆಗೂ ಗೈರಾಗದಂತೆ ಭಾಗವಹಿಸಿದ್ದು, ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾಗಿರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಸಿದ್ದರಿದ್ದು, ತಾಲೂಕು ಕಾರ್ಯನಿರತ ಪತ್ರಕರ್ತರ ಭವನಕ್ಕೆ ಶಾಸನಕರ ಅನುದಾನದಲ್ಲಿ ರು. 5 ಲಕ್ಷ ನೀಡುವುದಾಗಿ ತಿಳಿಸಿದರು.
ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಪತ್ರಕರ್ತರು ಸಾಕಷ್ಟು ಸಲಹೆ ಸಹಕಾರ ನೀಡಿದ್ದಾರೆ. ಅನೇಕ ಬಾರಿ ಬೀದಿಯಲ್ಲಿ ಹೋರಾಟ ಮಾಡಿರುವ ನಿದರ್ಶನಗಳಿದ್ದು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಳಾಂತರ ಆಗದಂತೆ ಪ್ರತಿಭಟನೆ ಮಾಡಿದ್ದೀರಿ, ಜತೆಗೆ ಗದಗ-ಹರಿಹರ ರೇಲ್ವೆ ಮಾರ್ಗ ಕುರಿತು ಈಗಾಗಲೇ ಕೇಂದ್ರ ರೇಲ್ವೆ ಸಚಿವ ಸದಾನಂದಗೌಡರ ಜತೆಗೆ ಚರ್ಚೆ ಮಾಡಿದ್ದೇನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದ್ದು, ಸಮಾಜದ ಬದಲಾವಣೆಗೆ ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಬರವಣಿಗೆಯಲ್ಲಿ ಆತ್ಮ ಸ್ಥೈರ್ಯ ಮತ್ತು ಆತ್ಮವಿಶ್ವಾಸವಿರಬೇಕು ಎಂದರು.
ಜಿಬಿಆರ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಐಗೋಳ್ ಚಿದಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಹಂಸನಂದಾಚಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಇಇ ಡಿ. ಬಸವನಗೌಡ ಹಾಗೂ ಶಿಲ್ಪಿ ಹಂಸನಂದಾಚಾರ್ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಂ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಉಪಸ್ಥಿರಿದ್ದರು. ಎಸ್. ನಿಂಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ನಿಂಗಪ್ಪ ಸ್ವಾಗತಿಸಿದರು. ವಿಶ್ವನಾಥ ನಿರೂಪಿಸಿದರು. ಚಂದ್ರಪ್ಪ ವಂದಿಸಿದರು.