ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 7
ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಚಲುವಾದಿ ಸಮುದಾಯದ ನಾಗಪ್ಪ ಅವರಿಗೆ ಸೇರಿದ 14.71 ಎಕರೆ ಭೂಮಿಯನ್ನು ಅದೇ ಗ್ರಾಮದ ಶಾಂತನಗೌಡ ಎಂಬವರು ಕಬಳಿಸಿದ್ದಾರೆ ಎಂದು ಆರೋಪಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ನೇತೃತ್ವದಲ್ಲಿ ಶಾನವಾಸಪುರ ಗ್ರಾಮದ ಚಲುವಾದಿ ನಾಗಪ್ಪ ಕುಟುಂಬದವರು ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಚ್. ಹನುಮಂತಪ್ಪ, ದಲಿತರಿಗೆ ಸೇರಿದ ಭೂಮಿಯನ್ನು ಇನಾಮಿ ಭೂಮಿಯೆಂದು ಗ್ರಾಮದ ಸವರ್ಣೀಯ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬರು ಕಂದಾಯ ಅಧಿಕಾರಿಗಳನ್ನು ಮುಂದಿಟ್ಟುಕೊಂಡು 1996ರಲ್ಲಿಯೇ ತಮ್ಮ ಹೆಸರಿಗೆ ಮಾಡಿಸಿಕೊಂಡು, ನಾಗಪ್ಪ ಕುಟುಂಬಕ್ಕೆ ಮೋಸ ಮಾಡಿದ್ದಾರೆ. ಮೂರು ವರ್ಷ ಹಿಂದಿನ ವರೆಗೂ ನಾಗಪ್ಪ ಕುಟುಂಬ ಉಳುಮೆ ಮಾಡುತ್ತಿದ್ದು, ಇದೀಗ ಆ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಹೋಗಿ ದಲಿತ ಕುಟುಂಬಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸುಮಾರು 30 ವರ್ಷಗಳಿಂದ ಚಲುವಾದಿ ನಾಗಪ್ಪನ ಕುಟುಂಬದವರು ಸಾಗುವಳಿ ಮಾಡುತ್ತಿದ್ದು, ಆ ಜಮೀನನ್ನು ವಶಪಡಿಸಿಕೊಂಡಿದ್ದಾರೆ. ಸಿರುಗುಪ್ಪ ಕಂದಾಯ ಇಲಾಖೆ ಅಧಿಕಾರಿಗಳು ನೆರವು ನೀಡಿದ್ದಾರೆ. ಇದು ದಲಿತ ಕುಟುಂಬದವರಿಗೆ ಗೊತ್ತಿರಲಿಲ್ಲ. ಇದು ಗೊತ್ತಾದ ಮೇಲೆ ಬಳ್ಳಾರಿ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಹೋದಾಗ ನಾಗಪ್ಪ ಅವರ ಪರವಾಗಿ ತೀರ್ಪು ನೀಡಿದ್ದರಿಂದ, ಶಾಂತನಗೌಡ ಅವರು ರಾಜಿಯ ನೆಪದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತಾಗಿ ಶಾಂತನಗೌಡ ಅವರು ಹೈಕೋರ್ಟ್ಗೆ ಹೋಗಿದ್ದು, ರಾಜಿಯ ನೆಪದಲ್ಲಿ ಮಾತುಕತೆ ನಡೆಸಿ, 14.71 ಎಕರೆಯಲ್ಲಿ 10 ಎಕರೆಯನ್ನು ನಾಗಪ್ಪ ಅವರಿಗೆ, ಇನ್ನುಳಿದ 4.71 ಎಕರೆ ಶಾಂತನಗೌಡರಿಗೆ ಬಿಟ್ಟು ಕೊಡಲು ಒಪ್ಪಿಗೆ ನೀಡಲಾಯಿತು. ನಾಗಪ್ಪ ಕುಟುಂಬದವರು ಬಂದಷ್ಟು ಬರಲಿ ಎಂದು ಸುಮ್ಮನಾಗಿದ್ದರು. ಆದರೆ ಹೈಕೋರ್ಟ್ನಲ್ಲಿ ನಾಗಪ್ಪ ಅವರು ವಿಚಾರಣೆಗೆ ಆಗಮಿಸಿಲ್ಲವೆಂಬ ನೆಪ ಹೇಳಿ ಶಾಂತನಗೌಡ ಪರವಾಗಿ ತೀರ್ಪು ಬಂದಿದೆ. ಶಾಂತನಗೌಡ ಅವರು ದಲಿತ ನಾಗಪ್ಪ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದೇವೆ. ಕೂಡಲೇ ನಾಗಪ್ಪ ಕುಟುಂಬಕ್ಕೆ ಸೇರಿದ ಜಮೀನನ್ನು ಮರಳಿಸಬೇಕು ಎಂದು ಆಗ್ರಹಿಸಿದರು. ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಎ. ಈಶ್ವರಪ್ಪ, ಬಿ. ಗುರುಸಿದ್ದಪ್ಪ, ತಾಯಣ್ಣ ಹುಬ್ಬಳ್ಳಿ, ರಾಮಣ್ಣ ಚೇಳ್ಳಗುರ್ಕಿ, ರಾಮಣ್ಣ ತೊಂಡಲಂ ಹಾಗೂ ನಾಗಪ್ಪ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ.