ಮಾಗಳ ಗ್ರಾಮದ ಅಕ್ರಮ ಕೆರೆ ತೆರವಿಗೆ ರೈತರ ಒತ್ತಾಯ
ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ರೈತನೊಬ್ಬ ರಸ್ತೆ ಬದಿ ಅಕ್ರಮ ಕೆರೆ ನಿರ್ಮಾಣ ಮಾಡಿಕೊಂಡು ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆ ನೀರನ್ನು ಬಳಕೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಮಾಗಳ ಗ್ರಾಮದ ಹೂವಿನಹಡಗಲಿ - ಮಾಗಳ ಜಿಲ್ಲಾ ಮುಖ್ಯ ರಸ್ತೆಯ ಬದಿಯಲ್ಲಿ ಹನುಮಂತಗೌಡ ಎಂಬುವರು ಅಕ್ರಮವಾಗಿ ಕೆರೆಯೊಂದನ್ನು ನಿರ್ಮಾಣ ಮಾಡಿಕೊಂಡಿದ್ದು, ಇದರಿಂದ ಸಾಕಷ್ಟು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಈ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಅತ್ತ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂಬ ದೂರು ಕೇಳಿಬರುತ್ತಿದೆ.
ಜಿಲ್ಲಾ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿನ ಮಳೆ ನೀರು ಹರಿಯಲು ರಸ್ತೆಗೆ ಸಿಡಿಯೊಂದನ್ನು ನಿರ್ಮಾಣ ಮಾಡಿದ್ದಾರೆ. ಆ ಸಿಡಿಯಲ್ಲಿ ನೀರು ಹರಿಯುವ ಪೈಪ್ಗಳಿಗೆ ಮಣ್ಣು ಅಡ್ಡಿ ಹಾಕಿದ್ದರಿಂದ ಮಳೆ ನೀರು ಹರಿಯಲು ಅನಾನುಕೂಲವಾಗಿದೆ. ಈ ಕೂಡಲೇ ಅಕ್ರಮ ಕೆರೆಯನ್ನು ತೆರವುಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಅಕ್ರಮ ಕೆರೆ ನಿರ್ಮಾಣ ಮಾಡಿರುವ ವ್ಯಕ್ತಿ, ರೈತರ ಮುಂದಿನ ಜಮೀನುಗಳಿಗೆ ನೀರು ಹರಿಸದೇ ಕೇವಲ ತಮ್ಮ ಅಕ್ರಮ ಕೆರೆಗೆ ನೀರು ಬಳಕೆ ಮಾಡುತ್ತಿದ್ದಾರೆಂಬ ದೂರು ರೈತರದ್ದು.
ಜಿಲ್ಲಾ ಮುಖ್ಯ ರಸ್ತೆ ವ್ಯಾಪ್ತಿಯಲ್ಲಿ ಅಕ್ರಮ ಕೆರೆ ನಿರ್ಮಾಣ ಮಾಡಿರುವ ಸ್ಥಳ ತನಿಖೆ ಮಾಡಿ ವರದಿ ನೀಡಲು ಎಂಜಿನಿಯರ್ಗೆ ಮಾಹಿತಿ ನೀಡಿ ವರದಿ ನೀಡಿದ ನಂತರದಲ್ಲಿ ಅಳತೆ ಮಾಡಿ ತಮ್ಮ ವ್ಯಾಪ್ತಿಗೆ ಒಳಪಡುವ ರಸ್ತೆಯನ್ನು ತೆರವು ಮಾಡುತ್ತೇವೆ ಎನ್ನುತ್ತಾರೆ ಪಂಚಾಯತ್ರಾಜ್ ಇಲಾಖೆ ಅಧಿಕಾರಿಗಳು