ಕನಕಗಿರಿಲಿ ಖರ್ಜೂರ ಗಿಡ
ಸೋಮಶೇಖರಯ್ಯ ಸ್ವಾಮಿ
ಕನಕಗಿರಿ: ಖರ್ಜೂರ ಮರುಭೂಮಿಯಲ್ಲಿ ಮಾತ್ರ ಬೆಳೆಯುವ ಗಿಡ. ಬೇರೆ ಪ್ರದೇಶದ ವಾತಾವರಣದಲ್ಲಿ ಬೆಳೆಯುವುದು ಕಡಿಮೆ. ಆದರೆ ಇದೇ ಖರ್ಜೂರ ಗಿಡ ಗಂಗಾವತಿ ತಾಲೂಕಿನ ಕನಕಗಿರಿಯ ಒಣಭೂಮಿಯಲ್ಲಿ ಸಮೃದ್ಧ ಫಲ ನೀಡುತ್ತಿರುವುದು ಅಚ್ಚರಿಯಾದರೂ ಸತ್ಯ.
ಸದ್ಯ ಖರ್ಜೂರದ ಮರ ಕನಕಗಿರಿ ನಿವಾಸಿ ಚನ್ನವೀರಯ್ಯಸ್ವಾಮಿ ಹಿರೇಮಠ ಅವರ ಮನೆ ಮುಂದೆ ಬೆಳೆದಿದೆ. ಸುಮಾರು 30 ವರ್ಷಗಳ ಹಿಂದೆ ಬಳ್ಳಾರಿಯ ಖಾದಾರಸಾಬ್ ಕುಟುಂಬ ಮೆಕ್ಕಾ ಯಾತ್ರೆಗೆ ಹೋಗಿದ್ದಾಗ ತಂದಿದ್ದ ಖರ್ಜೂರ ಹಾಗೂ ಇನ್ನಿತರ ವಸ್ತುಗಳನ್ನು ಪ್ರಸಾದದ ರೀತಿಯಲ್ಲಿ ಚನ್ನವೀರಯ್ಯ ಸ್ವಾಮಿಗೆ ನೀಡಿದ್ದರು. ಆದರೆ ಖರ್ಜೂರ ತಿನ್ನುವ ಬದಲು ಎರಡು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಬೆಳೆಸಿದರು. ಹೀಗೆ ನೆಟ್ಟ ಎರಡು ಬೀಜಗಳು ಸಸಿಗಳಾಗಿ ಬೆಳೆದವು. ಅದರಲ್ಲಿ ಒಂದನ್ನು ತಮ್ಮ ಗೆಳೆಯ ಖಾದರಸಾಬ್‌ಗೆ ನೀಡಿದ್ದು, ಮತ್ತೊಂದನ್ನು ಸ್ವಾಮಿ ತಮ್ಮ ಮನೆ ಮುಂದೆ ಬೆಳೆಸಿದ್ದಾರೆ.
ಖರ್ಜೂರ ಮುಸ್ಲಿಂ ಬಾಂಧವರ ರಂಜಾನ್ ಮತ್ತು ಹಿಂದೂಗಳ ಶಿವರಾತ್ರಿಯಲ್ಲಿ ಉಪವಾಸ ಆಚರಿಸುವ ವೇಳೆ ಸೇವಿಸುವ ಹಣ್ಣು. ಅದಕ್ಕಾಗಿಯೆ ಈ ಗಿಡ ಇಂದು ಧಾರ್ಮಿಕತೆಯ ಪ್ರತೀಕವಾಗಿದೆ. ರಂಜಾನ್ ತಿಂಗಳಲ್ಲಿ ಈ ಗಿಡಕ್ಕೆ ಭಾರಿ ಬೇಡಿಕೆ ಇರುತ್ತದೆ. ಅಂದು ಸಸಿಯಾಗಿದ್ದ ಗಿಡ ಇಂದು ಮರವಾಗಿ ಬೆಳೆದು ನಿಂತು ಭರ್ಜರಿ ಖರ್ಜೂರ ಹಣ್ಣನ್ನು ಕೊಡುತ್ತಿದೆ.
ಕುತೂಹಲಕಾರಿ ಸಂಗತಿ ಎಂದರೆ, ಈ ಗಿಡಕ್ಕೆ ಮಹ್ಮದ್ ಪೈಗಂಬರ್ ಎಂದು ಹೆಸರಿಟ್ಟಿದ್ದಾರೆ. ಮುಸ್ಲಿಮ ಪವಿತ್ರ ದಿನವಾದ ಶುಕ್ರವಾರ ಈ ಗಿಡ ಲಕ್ಷ್ಮೀ ರೂಪದಲ್ಲಿ ಕಾಣುತ್ತದೆಯಂತೆ! ಹೀಗಾಗಿ ಪ್ರತಿ ಶುಕ್ರವಾರ ಸ್ವಾಮಿ ಪೂಜೆ ಸಲ್ಲಿಸುತ್ತಾರೆ.
ಈ ಮರದ ತುಂಬ ಹಣ್ಣು ಬಿಟ್ಟಿದ್ದರೂ ಒಂದೇ ಒಂದು ಹಣ್ಣಿನಲ್ಲಿ ಬೀಜವಿಲ್ಲದಿರುವುದು ಇನ್ನೊಂದು ವಿಶೇಷ. ವಿಶೇಷವಾಗಿ ಮೆಕ್ಕಾದಿಂದ ತಂದ ಖರ್ಜೂರದಿಂದ ಈ ಗಿಡವನ್ನು ಬೆಳೆಸಿದ್ದರಿಂದ ರಂಜಾನ್ ತಿಂಗಳಲ್ಲಿ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ರಂಜಾನ್ ಆರಂಭವಾಗಿದ್ದು, ಗಿಡದಲ್ಲೂ ಹಣ್ಣುಗಳು ಗೊಂಚಲು ಗೊಂಚಲಾಗಿ ನಳನಳಿಸುತ್ತಿವೆ. ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಹೊರ ಹೊಮ್ಮಿರುವ ಈ ಖರ್ಜೂರ ಗಿಡ ಇಂದು ಎಲ್ಲರ ಗಮನ ಸೆಳೆದಿದೆ.