ಬಳ್ಳಾರಿ: ಜೀನ್ಸ್ ಕಾರ್ಖಾನೆಯಿಂದ ಹರಿದು ಬರುವ ವಿಷಪೂರಿತ ನೀರು ತೆರದ ಚರಂಡಿ ಸೇರುತ್ತಿದ್ದು, ತೆರೆದ ಚರಂಡಿಯನ್ನು ಕೂಡಲೇ ಬಂದ್ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಸಂಘದ ಕಾರ್ಯಕರ್ತರು ಸ್ಥಳೀಯ ಕುವೆಂಪು ನಗರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘದ ನಗರಾಧ್ಯಕ್ಷ ಲಕ್ಷ್ಮಿನಾರಾಯಣ ಯಾದವ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ನಗರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಜೀನ್ಸ್ ಘಟಕಗಳು ನಿತ್ಯ ಹೊರ ಬಿಡುವ ಕಲುಷಿತ ನೀರು ವಿಷಪೂರಿತವಾಗಿದೆ. ಇವು ತೆರೆದ ಚರಂಡಿ ಮೂಲಕ ಐದನೇ ವಾರ್ಡ್ ವ್ಯಾಪ್ತಿಯ ಕಾಕರ್ಲತೋಟ ಮತ್ತು ಪಾತ್ರ ಬೂದಿಹಾಳ್ ಪ್ರದೇಶಗಳಿಂದ ಹಾದುಹೋಗಿ ಹಳ್ಳ ಸೇರುತ್ತವೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕುರಿತು ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಬೆಂಗಳೂರಿನ ಉಪಲೋಕಾಯುಕ್ತ 15 ದಿನಗಳೊಳಗಾಗಿ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘದ ಡಿ. ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಪಿ.ಅಲ್ಲಾಸಾಬ್, ರಾಮದಾಸ್, ನಂದಾ, ಕೇಶವ್, ರುದ್ರಯ್ಯ ಚೌದರಿ, ರಮೇಶ್, ಜಿ. ಭೀಮಣ್ಣ, ಎಂ. ಸುರೇಶ್, ಚಂದ್ರ, ಸುಧಾಕರ್, ರಾಮಾಂಜಿನಿ, ಉಮೇಶ್, ಭಾಸ್ಕರ್, ವರಲಕ್ಷ್ಮಿ ಮತ್ತಿತರರು ಇದ್ದರು.