ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೇಂದ್ರದಿಂದ ಕಾರ್ಮಿಕ ವಿರೋಧಿ ನೀತಿ

Mainashree
Updated On : 15 Jul 2014, 9:43 am

ಬಳ್ಳಾರಿ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯು ಸೋಮವಾರ ನಗರದ ಬುಡಾ ಉದ್ಯಾನವನದಲ್ಲಿ ನಡೆದ ಬಹಿರಂಗ ಸಭೆಯಿಂದ ಅಂತ್ಯಗೊಂಡಿತು.
ಸಿಐಟಿಯು ರಾಷ್ಟ್ರೀಯ ಅಧ್ಯಕ್ಷ ಎ.ಕೆ. ಪದ್ಮನಾಭನ್ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಬಳ್ಳಾರಿಯಲ್ಲಿ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆ ಹಮ್ಮಿಕೊಂಡಿದ್ದ, ದೇಶಾದ್ಯಂತ ನೂರಾರು ಕಮ್ಯುನಿಸ್ಟ್ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಭೆಯಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಗ್ರಾಪಂ ನೌಕರರು, ಆಟೋ ಚಾಲಕರು, ಗಣಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾವಿರಾರು ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿ, ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದೇವೆ. ಇವುಗಳ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ ಎಂದರು.
ರೆಡ್ಡಿ ಬ್ರದರ್ಸ್ ಲೂಟಿ ಹೊಡೆದ ಗಣಿ ಹಣವನ್ನು ಕಾರ್ಮಿಕರಾರೂ ಕೇಳಿಲ್ಲ. ಕನಿಷ್ಠ ಕೂಲಿ ಕೇಳುತ್ತಿದ್ದು, 10 ವರ್ಷ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಅಂಗನವಾಡಿ, ಆಶಾ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರನ್ನು ನಿರ್ಲಕ್ಷಿಸಿದ್ದು, ಇದೀಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ಮುಂದುವರೆದಲ್ಲಿ ಪ್ರಧಾನಿ ಮೋದಿಯನ್ನು ಮರಳಿ ಗುಜರಾತ್‌ಗೆ ಕಳಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಆ. 1ರಿಂದ ಆ. 7ರ ವರೆಗೆ ಏಳುದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಳ್ಳುವ ಹೋರಾಟಕ್ಕೆ ದೇಶಾದ್ಯಂತ ಕಾರ್ಮಿಕರು ಬೆಂಬಲವಾಗಿ ನಿಲ್ಲಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ತಪನ್ ಸೇನ್ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ಬಳ್ಳಾರಿ ಜಿಲ್ಲೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಸಾರ್ವಜನಿಕರಿಗೆ ಸೇರಬೇಕಿದ್ದ ಕೋಟ್ಯಾಂತರ ರು. ಮೌಲ್ಯದ ಅದಿರನ್ನು ರೆಡ್ಡಿ ಬ್ರದರ್ಸ್ ಕೊಳ್ಳೆ ಹೊಡೆದಿದ್ದು, ಇದಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಆಂಧ್ರದಲ್ಲಿ ವೈ.ಎಸ್. ರಾಜಶೇಖರರೆಡ್ಡಿ ಬೆಂಬಲವಾಗಿ ನಿಂತಿದ್ದರು ಎಂದು ಆರೋಪಿಸಿದರು.
ಮೋದಿ ಸರ್ಕಾರವು ಚುನಾವಣೆಯಲ್ಲಿ ಸಹಕರಿಸಿದ ಬಂಡವಾಳ ಶಾಹಿಗಳ ಋಣ ತೀರಿಸಲು, ಆಶಾ, ಅಂಗನವಾಡಿ, ಬಿಸಿಯೂಟವನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದ್ದು, ಕಾರ್ಮಿಕರ ಹೋರಾಟದ ಹಕ್ಕಿಗೂ ಕುತ್ತು ತರುತ್ತಿದೆ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಕಾರ್ಯದರ್ಶಿ ವರಲಕ್ಷ್ಮಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಎಸ್.ಪ್ರಸನ್ನ ಕುಮಾರ್ ಮಾತನಾಡಿದರು. ಸಭೆಯಲ್ಲಿ ಸಿಐಟಿಯು ಮುಖಂಡ ಮಹಾಂತೇಶ್, ಜಿಲ್ಲಾ ಕಾರ್ಯದರ್ಶಿ ಹುಳ್ಳಿ ಉಮೇಶ್, ಕೋಟೇಶ್ವರರಾವ್, ಆರ್.ಎಸ್.ಬಸವರಾಜ್, ನಾಗರತ್ನಾ,  ಯು.ಬಸವರಾಜ್, ಸತ್ಯಬಾಬು, ಟಿ.ಜಿ. ವಿಠಲ್, ವಿವಿಧ ರಾಜ್ಯಗಳಿಂದ ಸಭೆಗೆ ಆಗಮಿಸಿದ್ದ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರು, ಗ್ರಾ.ಪಂ. ನೌಕರರು, ಆಟೋ ಚಾಲಕರು ಭಾಗವಹಿಸಿದ್ದರು.
ಸಭೆಗೂ ಮುನ್ನ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ಕ್ಷೇತ್ರಗಳ ಸಾವಿರಾರು ಕಾರ್ಯಕರ್ತರಿಂದ ಸ್ಥಳೀಯ ದುರ್ಗಮ್ಮ ದೇವಸ್ಥಾನದಿಂದ ಬೃಹತ್ ರ್ಯಾಲಿ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement