ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಣಜಿಗ ಸಮಾಜದ ಪ್ರಗತಿಗೆ ಆದ್ಯತೆ

Mainashree
Updated On : 15 Jul 2014, 9:44 am

ಹೂವಿನಹಡಗಲಿ: ಬಣಜಿಗ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆ ಹಾಗೂ ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡುವಲ್ಲಿ ಪ್ರಯತ್ನಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಭಾನುವಾರ ಪಟ್ಟಣದ ಮಲ್ಲನಕೆರೆಮಠದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ 2ಎ ಪ್ರಮಾಣ ಪತ್ರ ನೀಡುವಂತೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾಮಟ್ಟದ ಸಮಾವೇಶದ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಈ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳುತ್ತಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲ ತೊಂದರೆಗಳನ್ನು ಸರಿಪಡಿಸಿ ಕಾನೂನಾತ್ಮಕ ಮತ್ತು ನ್ಯಾಯ ಸಮ್ಮತವಾಗಿ ಪ್ರಮಾಣ ಪತ್ರವನ್ನು ನೀಡಲು ಸೂಚಿಸುತ್ತೇನೆಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿದಿದೆ. ಸಮಾಜದ ನಿರುದ್ಯೋಗಿ ಯುವಕರು, ವಿದ್ಯಾವಂತರು ಆ ಮೂಲಕ ತಮ್ಮ ಸ್ವಾಭಿಮಾನದ ಜೀವನವನ್ನು ಸೃಷ್ಟಿಸಿಕೊಂಡು ಸಮಾಜವನ್ನು ಸುಧಾರಿಸಬೇಕಿದೆ ಎಂದರು.
ಸಮಾಜದ ರಾಜ್ಯ ಗೌರವಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ಮಾತನಾಡಿ, ಸಮಾಜಕ್ಕೆ ರಾಜ್ಯವ್ಯಾಪಿ 2ಎ ಮತ್ತು 3ಎ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಈ ಕುರಿತು ತಕರಾರಿನಿಂದ ಈವರೆಗೂ ಪ್ರಮಾಣ ಪತ್ರಗಳನ್ನು ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಿ ಈ ಗೊಂದಲವನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಇಲ್ಲಿನ ತಾಲೂಕು ಘಟಕವು ನಿರಂತರವಾಗಿ ರಾಜ್ಯ ಸಂಘಕ್ಕೆ ಪ್ರೋತ್ಸಾಹ ನೀಡುತ್ತಿದೆ. ಪ್ರಸ್ತುತ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಪ್ರತಿವರ್ಷ ನಿರಂತರವಾಗಿ ನಡೆಯಬೇಕು. ಜತೆಗೆ ಈಗಾಗಲೇ ರಾಜ್ಯ ಸಂಘದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದು, ಆರ್ಥಿಕ ನೆರವಿನ ಅಗತ್ಯವಿದೆ. ತಾಲೂಕು ಘಟಕಗಳು ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡರು. ಶಿಕ್ಷಕ ಸದ್ಗುಣ ಹಾಗೂ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಕ್ಷೇತ್ರ ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ ಹಾಗೂ ಸ್ಥಳೀಯ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಣ್ಣ ಎಂ. ಸಕ್ರಿ ಧ್ವಜಾರೋಹಣ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಮುಖಂಡ ಅರವಳ್ಳಿ ವೀರಣ್ಣ, ಅಟವಾಳಿಗಿ ಕೊಟ್ರೇಶ, ತಾಲೂಕು ಸಂಘದ ಅಧ್ಯಕ್ಷ ಉಮೇಶ ಮುಂಡವಾಡದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾ. ಡಾ. ರುದ್ರಪ್ಪ ಕರಿಶೆಟ್ಟಿ, ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಜಂಬಣ್ಣ ಯಲಗಚ್ಚಿನ, ನಿಕಟ ಪೂರ್ವ ಅಧ್ಯಕ್ಷ ಬಸವರಾಜ ಅಂಗಡಿ, ಡಾ.ಶಿವಕುಮಾರ ಬೆಲ್ಲದ, ಹೊಳಲು ಘಟಕದ ಗುರುಲಿಂಗಪ್ಪ ಹಾವೇರಿ, ಹಿರೇಹಡಗಲಿ ಘಟಕದ ಅಧ್ಯಕ್ಷ ಎಸ್.ಎಂ. ಜಯದೇವಪ್ಪ, ವಕೀಲ  ಬಿ.ವಿ. ಶಿವಯೋಗಿ ಇದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement