ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ: ಲೋಕೇಶ
ಸಿರುಗುಪ್ಪ: ವಿದ್ಯಾರ್ಥಿಗಳು ಕಾಲೇಜ್ ಜೀವನದಿಂದಲೇ ಬದುಕು ಕಟ್ಟಿಕೊಳ್ಳಬೇಕು. ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ ಎಂಬ ಕೀಳರಿಮೆ ಬಿಟ್ಟು ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಿರುಗುಪ್ಪ ಠಾಣೆಯ ಸಿಪಿಐ ಎನ್. ಲೋಕೇಶ ತಿಳಿಸಿದರು.
ಪಟ್ಟಣದ ವಿ.ಕೆ.ಜೆ. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಕನಕದಾಸ ಮಾತನಾಡಿ, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಪಪೂ ಹಂತ ಅತ್ಯಂತ ಮುಖ್ಯವಾಗಿದೆ. ನಿರಂತರ ಅಭ್ಯಾಸದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ. ಶೃತಿ ವಿಠಲ್ ರಾವ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಶಿವಕುಮಾರ, ವೀಣಾ, ದೀಪರಾಮ್, ಯೋಗೇಶ್‌ಜಾಲಿ, ಶಾಂತಮ್ಮ, ಸರೋಜ, ಕಾಳೇಶ್ವರಿ, ವಿಜಯಲಕ್ಷ್ಮೀ, ಪಿ. ಮಂಜುನಾಥ, ಅಮೃತ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಮಲ್ಲೇಶಪ್ಪ ಶಿರಸ್ತೇದಾರ, ಡಾ. ಜಗನ್ನಾಥ್, ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಶಿವಕುಮಾರ ಬಳಿಗಾರ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾ. ಮುತಾಲಿಕ್ ಇದ್ದರು.